ಯಾದಗಿರಿ: ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿ ಅಪಹರಿಸಿಕೊಂಡು ಹೋದ ಘಟನೆ ಶನಿವಾರ ನಗರದ ಲುಂಬಿನಿ ಪಾರ್ಕ್ ಎದುರಿಗೆ ಬೆಳಗ್ಗೆ 11.45ರ ಸುಮಾರಿಗೆ ನಡೆದಿದೆ.
ಬೆಳಗ್ಗೆ ಎಂದಿನಂತೆ ಮನೆಯಿಂದ ಹೊರಟಿದ್ದ ಕ್ರಾಂತಿ ಪತ್ರಿಕೆಯ ಜಿಲ್ಲಾ ವರದಿಗಾರ ಸಾಗರ್‌ಕುಮಾರ ದೇಸಾಯಿ (35) ಅವರನ್ನು ಲುಂಬಿನಿ ಪಾರ್ಕ್ ಬಳಿ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ನಾಲ್ವರು ಅಡ್ಡಗಟ್ಟಿ, ಹಲ್ಲೆ ನಡೆಸಿದ್ದಾರೆ.
ಸುತ್ತಮುತ್ತ ಜನರು ಘಟನೆ ಬಗ್ಗೆ ಅರಿಯುವಷ್ಟರಲ್ಲಿ ದುಷ್ಕರ್ಮಿಗಳು ಸಾಗರ್ ಅವರನ್ನು ಎತ್ತಿ ಕಾರಿನಲ್ಲಿ ಬಲವಂತವಾಗಿ ಹಾಕಿ, ಜನರು ಜಮಾಯಿಸುವ ಮುನ್ನವೇ ಭಾರಿ ವೇಗದಲ್ಲಿ ಪರಾರಿಯಾಗಿದ್ದಾರೆ.
'ಕ್ರಾಂತಿ' ಪತ್ರಿಕೆಯ ಪತ್ರಕಕರ್ತನ ಅಪಹರಣ
ಈ ಘಟನೆ ನಡೆಯುವ ವೇಳೆ ಲುಂಬಿನಿ ಪಾರ್ಕಿನ ಕಾವಲುಗಾರ, ಹೋಂಗಾರ್ಡ್ ಸಿಬ್ಬಂದಿ ವಿಶ್ವ ತಡೆಯುವ ಪ್ರಯತ್ನದಲ್ಲಿ ಬಂದಾಗ ಕಾರು ವೇಗವಾಗಿ ದಾಟಿಕೊಂಡು ಹೋಗಿದೆ. ಕೂಡಲೇ ವಿಶ್ವ ಅವರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಸುದ್ದಿ ಅರಿಯುತ್ತಲೇ ಎಸ್ಪಿ ಪೃಥ್ವಿಕ್ ಶಂಕರ್ ಕಾರ್ಯಪ್ರವೃತ್ತರಾಗಿ, ನಾಕಾಬಂದಿಗೆ ಸೂಚಿಸಿದರು. ನಗರ ಠಾಣೆಯ ಪಿಎಸ್‌ಐ ಮಂಜುನಾಥ್ ಹಾಗೂ ಅವರ ತಂಡ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.


