ಬೆಳಗಾವಿ: ಪ್ರಸ್ತುತ ಜಲಾಶಯದಲ್ಲಿರುವ ನೀರಿನ ಸಂಗ್ರಹ, ಮಳೆಯ ಪ್ರಮಾಣ ಮತ್ತು ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ನೀರಿನ ಅಗತ್ಯವನ್ನು ಪರಿಗಣಿಸಿ ನೀರು ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ರಾಮದುರ್ಗ ತಾಲೂಕಿನ ಚಂದರಗಿ ಕ್ರೀಡಾ ಶಾಲೆಯ ಸಭಾಂಗಣದಲ್ಲಿ ರವಿವಾರ ನಡೆದ ಮಲಪ್ರಭಾ ಯೋಜನೆ 2026-27 ನೇ ಸಾಲಿನ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಲಪ್ರಭಾ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಸಮರ್ಪಕವಾಗಿ ನೀರು ಬಿಡುಗಡೆ ಮಾಡಲಾಗುವುದು ಎಂದರು.
ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರಿನ ಲಭ್ಯತೆ, ಜಲಾಶಯದ ನೀರಿನ ಸಂಗ್ರಹ ಮಟ್ಟ ಹಾಗೂ ಹವಾಮಾನ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕು.
ಮಳೆಯ ಪ್ರಮಾಣದಲ್ಲಿ ಏರಿಳಿತ ಉಂಟಾದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ನೀರು ಬಿಡುಗಡೆ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.


