ಬೆಳಗಾವಿ: ರಾಜ್ಯದ ಕಾರಾಗೃಹಗಳಲ್ಲಿ (Jail) ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ (Illegal Activity) ಎಂಬ ಆರೋಪಗಳು (Shocking) ಆಗಾಗ್ಗೆ ಕೇಳಿಬರುತ್ತಲೇ ಇವೆ.
ಇದೀಗ ಬೆಳಗಾವಿಯ (Belagavi) ಹಿಂಡಲಗಾ ಜೈಲಿಗೆ ಸಂಬಂಧಿಸಿದಂತೆ ರೌಡಿಶೀಟರ್‌ವೊಬ್ಬ ಮಾಡಿರುವ ಗಂಭೀರ ಆರೋಪಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜೈಲು ಹಾಗೂ ಪೊಲೀಸ್ ಇಲಾಖೆ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ತುಮಕೂರು ಮೂಲದ ರೌಡಿಶೀಟರ್ ಸುರೇಶ್ ಅಲಿಯಾಸ್ ಸಾಯಿ ಕುಮಾರ್ ಎಂಬಾತ ಹಿಂಡಲಗಾ ಜೈಲಿನಲ್ಲಿದ್ದ ವೇಳೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ ಎನ್ನಲಾಗಿದೆ.
ಜೈಲಿನೊಳಗೆ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆತ ಆರೋಪಿಸಿದ್ದು, ವಿಡಿಯೋದಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾನೆ.
ಹಣ ನೀಡಿದರೆ ಜೈಲಿನೊಳಗೆ ಕೈದಿಗಳಿಗೆ ಮೊಬೈಲ್ ಫೋನ್ ಹಾಗೂ ಮದ್ಯ ಸಿಗುತ್ತದೆ ಎಂದು ಸುರೇಶ್ ಆರೋಪಿಸಿದ್ದಾನೆ. ಸಿಬ್ಬಂದಿಗೆ ಲಂಚ ನೀಡಿದರೆ ಜೈಲಿನ ನಿಯಮಗಳನ್ನು ಉಲ್ಲಂಘಿಸಿ ಹಲವು ಅಕ್ರಮ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗುತ್ತದೆ ಎಂಬ ಆರೋಪವನ್ನೂ ಮಾಡಿದ್ದಾನೆ.
ಇಷ್ಟೇ ಅಲ್ಲದೆ, ಜೈಲಿನೊಳಗೆ ನಡೆಯುತ್ತಿದೆ ಎನ್ನಲಾದ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳು ತಮ್ಮ ಬಳಿ ಇವೆ ಎಂದು ಸುರೇಶ್ ಹೇಳಿಕೊಂಡಿದ್ದಾನೆ. ಈ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಿಂಡಲಗಾ ಜೈಲಿನ ಆಡಳಿತ ವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.


