ಬೆಂಗಳೂರು : ಖ್ಯಾತ ಹಿರಿಯ ಗಾಯಕಿ, 'ಗಾನಕೋಗಿಲೆ' ಎಂದೇ ಪ್ರಸಿದ್ಧರಾದ ಎಸ್. ಜಾನಕಿ ಅವರು ಶನಿವಾರ ಸಂಜೆ ಇಹಲೋಕ ತ್ಯಜಿಸಿದ್ದು, ಅವರ ಅಂತ್ಯಸಂಸ್ಕಾರವು ಭಾನುವಾರ (ಇಂದು) ಸಂಜೆ ಮೈಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಮೈಸೂರು ತಾಲೂಕಿನ ಕಣಯನಹುಂಡಿ ಗ್ರಾಮದಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳು ಜರುಗಲಿವೆ.
ಮೈಸೂರಿನಲ್ಲಿ ನಿಧನರಾಗಿರುವ ಗಾನ ಕೋಗಿಲೆ ಎಸ್. ಜಾನಕಿ ಅವರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದರು.ಸ್ವರ ಸಾಮ್ರಾಜ್ಞಿ ಎಸ್. ಜಾನಕಿ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಸರ್ಕಾರದ ಪರವಾಗಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ನಿಯೋಜಿಸಲಾಗಿದೆ. ತಮ್ಮ ಅದ್ಭುತ ಕಂಠಸಿರಿಯಿಂದ ಕೋಟ್ಯಂತರ ಹೃದಯಗಳನ್ನು ಗೆದ್ದ ಮಹಾನ್ ಗಾಯಕಿಗೆ ಗೌರವಪೂರ್ವಕ ವಿದಾಯ ಹೇಳಲು ಸರ್ಕಾರ ತೀರ್ಮಾನಿಸಿದೆ.
ಸಿಎಂ ಡಿ.ಕೆ. ಶಿವಕುಮಾರ್ ಸಂತಾಪ
ಭಾರತೀಯ ಚಿತ್ರರಂಗದ ಅಪ್ರತಿಮ ಹಿನ್ನೆಲೆ ಗಾಯಕಿ, ಕನ್ನಡ ಚಿತ್ರರಂಗದ ಮೇರುಗಾಯಕಿ, ಗಾನಕೋಗಿಲೆ ಶ್ರೀಮತಿ ಎಸ್. ಜಾನಕಿ ಅವರ ನಿಧನದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ.
ತಮ್ಮ ಕಂಠಸಿರಿಯ ಮೂಲಕ ಕೋಟ್ಯಂತರ ಜನರ ಮನೆಮನಗಳಲ್ಲಿ ನೆಲೆಸಿದ್ದ ಬಹುಭಾಷಾ ಗಾಯಕಿ ಜಾನಕಮ್ಮನವರ ನಿಧನದಿಂದ ಸಂಗೀತ ಕ್ಷೇತ್ರದ ಮಹಾನ್ ಸ್ವರಮಾಧುರ್ಯ ಮೌನವಾದಂತಾಗಿದೆ.


