ಬೆಂಗಳೂರು: "ರಾಮಾಯಣದಲ್ಲಿ ಶ್ರೀರಾಮನಿಗಿಂತ ಸೀತೆಯ ವ್ಯಕ್ತಿತ್ವ ಬಹಳ ದೊಡ್ಡದು. ಆಕೆಯ ತ್ಯಾಗ ಹಾಗೂ ಹೋರಾಟದ ಬದುಕು ನಮಗೆಲ್ಲರಿಗೂ ಮಾದರಿಯಾಗಿದೆ.
ಮಹಿಳೆಯರು ಸೃಷ್ಟಿಕರ್ತರಾಗಿದ್ದು, ಸವಾಲುಗಳನ್ನು ಮೆಟ್ಟಿ ನಿಂತು ಉದ್ದಿಮೆ ಕಟ್ಟಿರುವ ಮಹಿಳಾ ಉದ್ಯಮಿಗಳು ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ" ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶಂಸಿಸಿದರು.
ಎಫ್.ಕೆಸಿಸಿಐ ಸಭಾಂಗಣದಲ್ಲಿ ನಡೆದ 'ಉಬುಂಟು' ಸಂಸ್ಥೆಯ 5ನೇ ಆವೃತ್ತಿಯ 'ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮ ಪಂಚಾಯತಿಯಿಂದ ಸಂಸತ್ತಿನವರೆಗೆ ಮಹಿಳಾ ನಾಯಕತ್ವದ ಅಗತ್ಯವಿದೆ ಎಂದ ಅವರು, ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಸಂಪೂರ್ಣ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
"ಶಕ್ತಿ ಯೋಜನೆಯಡಿ ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಬೆಳೆಸುತ್ತಿದ್ದು, ಇದು ಅವರ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸಿದೆ. ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ವಿರೋಧದ ನಡುವೆಯೂ, 'ಗೃಹಲಕ್ಷ್ಮಿ' ಯೋಜನೆಯಡಿ 1.22 ಕೋಟಿ ಮಹಿಳೆಯರಿಗೆ ತಿಂಗಳಿಗೆ 2,000 ರೂ. ತಲುಪಿಸಲಾಗುತ್ತಿದ್ದು, ಇದು ಕುಟುಂಬ ನಿರ್ವಹಣೆಗೆ ಆಸರೆಯಾಗಿದೆ" ಎಂದರು.


