ಹುಬ್ಬಳ್ಳಿ: ಬಿಜೆಪಿಯವರು ನಡೆಸುತ್ತಿರುವ ಪಾದಯಾತ್ರೆಯು ಅವರ ರಾಜಕೀಯ ಅಸ್ತಿತ್ವಕ್ಕಾಗಿಯೇ ವಿನಹ ರಾಜ್ಯದ ಮತ್ತು ರೈತರ ಹಿತಾಸಕ್ತಿಗಾಗಿ ಅಲ್ಲ. ಅವರು ಇಂತಹ ನೂರು ಯಾತ್ರೆ ಮಾಡಲಿ. ನಾವು ಹೆದರಲ್ಲ. ಅದಕ್ಕೆ ಸೂಕ್ತ ಸಮಯದಲ್ಲಿ ಉತ್ತರಿಸುವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮಂಗಳವಾರ (ಸೆ.01) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ರಾಜಕಾರಣವೇ ಮುಖ್ಯವಾಗಿದೆ. ಸದನದಲ್ಲಿ ಯಾವ ವಿಷಯಕ್ಕೂ ಚರ್ಚೆಗೆ ಅವಕಾಶ ಮಾಡಲಿಲ್ಲ. ಮಾಜಿ ಸಚಿವ ಬಿ. ನಾಗೇಂದ್ರ ಪಕ್ಷಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ನೀಡಿದರು.
ಆದರೆ, ಬಿಜೆಪಿಯವರು ರಾಜಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಹಿಂದೆ ನಾವು ಸಹ ಬಳ್ಳಾರಿಯಿಂದ ಬೆಂಗಳೂರುವರೆಗೆ ಹಾಗೂ ಕನ್ಯಾಕುಮಾರಿಯಿಂದ ಕಾಶ್ಮೀರ ವರೆಗೆ ಪಾದಯಾತ್ರೆ ಮಾಡಿದ್ದೆವು.
ನಮ್ಮ ಯಾತ್ರೆಯು ದೇಶದ ಹಿತಕ್ಕಾಗಿಯಾದರೆ, ಅವರದು ರಾಜಕೀಯ ಹಿತಾಸಕ್ತಿಗಾಗಿ ಆಗಿದೆ. ಅವರ ಪಾದಯಾತ್ರೆಯ ಹೆಜ್ಜೆಯು ನಮ್ಮ ಮಾರ್ಕ್ ಆಗಿದೆ ಎಂದರು.
ರಾಜ್ಯದ ಬಹಳಷ್ಟು ಜಿಲ್ಲೆ, ತಾಲೂಕಗಳ ಜನಪ್ರತಿನಿಧಿಗಳು ತಮ್ಮ ಕ್ಷೇತ್ರವನ್ನು ಬರ ಘೋಷಣೆ ಮಾಡುವಂತೆ ಕೇಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರದ ನಿಯಮಾನುಸಾರ ಹಾಗೂ ಬರಗಾಲ ಬಗ್ಗೆ ವರದಿ ಬಂದ ಮೇಲೆ ಅದರ ಆಧಾರ ಮೇಲೆ ವೈಜ್ಞಾನಿಕವಾಗಿ ಅಧಿಕಾರಿಗಳು ಅದರ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ. ವಿಪಕ್ಷದವರು ಈ ಬಗ್ಗೆ ಧ್ವನಿ ಎತ್ತಲಿ ಎಂದು ಕುಟುಕಿದರು.
ರಾಹುಲ್ ಗಾಂಧಿ ಮೇಲೆ ಪ್ರಕರಣ ದಾಖಲು ಮಾಡಿದ್ದು ಸರಿಯಲ್ಲ. ಅವರೇನು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂದು ಹರಿಹಾಯ್ದರು.


