ಬೆಂಗಳೂರು: ಅಮೆರಿಕ ಪ್ರವಾಸದಿಂದ ವಾಪಸ್ ಬಂದ ತಕ್ಷಣ ದೇಶದಲ್ಲೇ ಭಾರೀ ಸಂಚಲನ ಸೃಷ್ಟಿಸುವ ಹಾಗೂ ಅಲ್ಲೋಲ ಕಲ್ಲೋಲ ಉಂಟುಮಾಡುವ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಾದ 'ಜೆಪಿ ಭವನ'ದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಕ್ಕ ಸಮ್ಮೇಳನ'ದ ಹಿನ್ನೆಲೆಯಲ್ಲಿ ತಾವು ಅಮೆರಿಕಗೆ ತೆರಳುತ್ತಿದ್ದು, ಹತ್ತು ದಿನಗಳ ನಂತರ ಹಿಂತಿರುಗಲಿದ್ದೇನೆ.
ಬಂದ ಬಳಿಕ ದಿನಕ್ಕೊಂದು ಬಾಂಬ್ ಸಿಡಿಸಿ, ಸತ್ಯಾಸತ್ಯತೆಗಳನ್ನು ಜನರ ಮುಂದಿಡುತ್ತೇನೆ. ಆಗ "ಹೆಚ್.ಡಿ. ಕುಮಾರಸ್ವಾಮಿ ಎಂದರೆ ಏನು" ಎಂಬುದು ಪ್ರತಿಯೊಬ್ಬರಿಗೂ ಗೊತ್ತಾಗಲಿದೆ ಎಂದು ಸವಾಲು ಎಸೆದಿದ್ದಾರೆ.
ಕೆಪಿಎಸ್‌ಸಿ ಅಕ್ರಮ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ: ಇದೇ ವೇಳೆ ಕರ್ನಾಟಕ ಲೋಕಸೇವಾ ಆಯೋಗ (KPSC) ಅಕ್ರಮದ ಕುರಿತು ಪ್ರಸ್ತಾಪಿಸಿದ ಕುಮಾರಸ್ವಾಮಿ, ಈ ಹಿಂದೆ ಸದನದಲ್ಲಿ ಮುಖ್ಯಮಂತ್ರಿಗಳು ನೀಡಿದ್ದ ಉತ್ತರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದರು. "ಅರ್ಹ ಅಭ್ಯರ್ಥಿಗಳಿಗೆ ಆರ್ಡರ್ ಕಾಪಿ ಕೊಡಬೇಡಿ ಎಂದು ಕೆಪಿಎಸ್‌ಸಿ ಕಾರ್ಯದರ್ಶಿಯೇ ಹೇಳಿದ್ದರು.
ಆದಾಗ್ಯೂ ಸರ್ಕಾರ ಈ ವಿಚಾರದಲ್ಲಿ ಯಾವುದೇ ಮೇಲ್ಮನವಿ (ಅಪೀಲು) ಸಲ್ಲಿಸಿಲ್ಲ. ನೀವು ಯಾರನ್ನು ಕಾಪಾಡಲು ಮುಂದಾಗುತ್ತಿದ್ದೀರಿ? OMR ಶೀಟ್ ತಿದ್ದಿ ಪರೀಕ್ಷೆ ಪಾಸ್ ಆಗಿರುವ ಅಕ್ರಮ ಅಭ್ಯರ್ಥಿಗಳಿಗೆ ರಕ್ಷಣೆ ನೀಡುತ್ತಿದ್ದೀರಾ?" ಎಂದು ರಾಜ್ಯ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದರು.


