ಚಿಕ್ಕಬಳ್ಳಾಪುರ : ಅನುಮಾನಾಸ್ಪದವಾಗಿ ಮೃತಪಟ್ಟ ಯುವಕನ (boy) ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೇ ಬೆಚ್ಚಿಬಿದ್ದ ಘಟನೆಯೊಂದು ಚಿಕ್ಕಬಳ್ಳಾಪುರ ತಾಲೂಕಿನ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ. ಮೃತನ ಹೊಟ್ಟೆಯನ್ನು ಪರಿಶೀಲಿಸಿದಾಗ ಲೈಟರ್, ಬ್ಯಾಟರಿ ಸೆಲ್, ಬೀಗದ ಕೀಗಳು ಸೇರಿದಂತೆ ಹಲವು ಅಪಾಯಕಾರಿ ಲೋಹದ ವಸ್ತುಗಳು ಪತ್ತೆಯಾಗಿವೆ.
ಸದ್ಯ ಈ ಘಟನೆ ಅಚ್ಚರಿಗೂ ಕಾರಣವಾಗಿದ್ದು, ಯುವಕನ ಸಾವಿನ ಸುತ್ತ ಹತ್ತಾರು ಅನುಮಾನಗಳು ಹುಟ್ಟಿಕೊಂಡಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿನಗರದಲ್ಲಿ 28 ವರ್ಷದ ಮಹೇಶ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಮೂಲತಃ ಚಿಕ್ಕಬಳ್ಳಾಪುರ ತಾಲೂಕಿನ ನಲ್ಲಕದಿರೇನಹಳ್ಳಿ ಗ್ರಾಮದ ನಿವಾಸಿಯಾಗಿರುವ ಮಹೇಶ್, ಕಳೆದ ಕೆಲವು ದಿನಗಳಿಂದ ಅಕ್ಕನ ಮನೆಯಲ್ಲಿ ವಾಸವಾಗಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಂದರೆ ನಿನ್ನೆ ಮಹೇಶ್ ನೇಣು ಬಿಗಿದುಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಮೃತದೇಹ ನೆಲದ ಮೇಲೆ ಪತ್ತೆಯಾಗಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.
ಹೀಗಾಗಿ ಯುವಕನ ಸಾವು ಆತ್ಮಹತ್ಯೆಯೋ ಅಥವಾ ಬೇರೆ ಏನಾದರೂ ನಡೆದಿದೆಯೋ ಎನ್ನುವ ಕುರಿತು ಮರಣೋತ್ತರ ಪರೀಕ್ಷೆಗೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ವೈದ್ಯರು ಮರಣೋತ್ತರ ಪರೀಕ್ಷೆ ವೇಳೆ ಮೃತನ ಹೊಟ್ಟೆಯಲ್ಲಿ ಲೈಟರ್, ಬ್ಯಾಟರಿ ಸೆಲ್, ಬೀಗದ ಕೀಗಳು, ಹೇರ್ ಪಿನ್, ಔಷಧಿ ಟ್ಯೂಬ್‌ಗಳು, ಕಬ್ಬಿಣದ ಚೂರುಗಳು ಪತ್ತೆಯಾಗಿದ್ದು, ವೈದ್ಯರೇ ಶಾಕ್ ಆಗಿದ್ದಾರೆ. ಯುವಕನ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಆಚೆ ತೆಗೆಯಲಾಗಿದೆ.
ಇಷ್ಟೊಂದು ವಸ್ತುಗಳು ಒಬ್ಬ ವ್ಯಕ್ತಿಯ ಹೊಟ್ಟೆಯೊಳೆಗೆ ಹೇಗೆ ಸೇರಿದವು? ಇದು ಆತ್ಮಹತ್ಯೆನಾ ಅಥವಾ ಬೇರೆ ಯಾವುದಾದರೂ ರಹಸ್ಯವಿದೆಯಾ ಎಂದು ಪೊಲೀಸರು ತನಿಖೆ ನಡೆಸಿದ್ದಾರೆ.
ಮತ್ತೊಂದೆಡೆ ಮೃತ ಮಹೇಶ್‌ಗೆ ಸಾಲದ ಸಮಸ್ಯೆ ಇತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಹಿಂದೆಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಇದೀಗ ಪತ್ತೆಯಾದ ವಸ್ತುಗಳು ಯಾವಾಗ, ಹೇಗೆ ಹೊಟ್ಟೆಯೊಳಗೆ ಸೇರಿದವು.
ಆತ ಯಾವತ್ತು ತಮ್ಮ ಎದುರುಗಡೆ ವಸ್ತುಗಳನ್ನು ನುಂಗಿರಲಿಲ್ಲ ಎನ್ನುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಗುಡಿಬಂಡೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.


