ಬೆಂಗಳೂರು: ರಾಜ್ಯ ಸರ್ಕಾರದ (Karnataka Government) ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ 'ಗೃಹಲಕ್ಷ್ಮಿ' (Gruha Lakshmi) ಯೋಜನೆಯು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರ್ಣಗೊಳಿಸಿದ್ದು, ಈ ವಿಶೇಷ ಮೈಲಿಗಲ್ಲನ್ನು ವಿಶಿಷ್ಟವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.
ಈ ಮೂರನೇ ವರ್ಷದ ಸಂಭ್ರಮಾಚರಣೆಯ ಸವಿನೆನಪಿಗಾಗಿ ರಾಜ್ಯದ ಪ್ರಮುಖ ಐತಿಹಾಸಿಕ ಕಟ್ಟಡಗಳು ಹಾಗೂ ಸರ್ಕಾರಿ ಸೌಧಗಳು (Vidhan Soudha) ಗುಲಾಬಿ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸಲಿವೆ.
ಆಗಸ್ಟ್ 30 ರಂದು ಕಂಗೊಳಿಸಲಿದೆ ಕಟ್ಟಡಗಳು
ಮಹಿಳಾ ಸಬಲೀಕರಣದ ಸಂಕೇತವಾಗಿರುವ ಈ ಸಂಭ್ರಮಕ್ಕಾಗಿ ರಾಜಧಾನಿ ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣ ಸೌಧ ಹಾಗೂ ವಿಶ್ವಪ್ರಸಿದ್ಧ ಮೈಸೂರು ಅರಮನೆಯನ್ನು ವಿಶೇಷ ಪಿಂಕ್ (ಗುಲಾಬಿ) ಲೈಟ್‌ಗಳಿಂದ ಶೃಂಗರಿಸಲಾಗುತ್ತಿದೆ. ಇದರೊಂದಿಗೆ ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರದುರ್ಗದ ಕಲ್ಲಿನ ಕೋಟೆ, ಹಂಪಿಯ ಪ್ರಸಿದ್ಧ ಕಲ್ಲಿನ ರಥ, ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ಹಾಗೂ ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೃತ್ತ ಸೇರಿದಂತೆ ರಾಜ್ಯದ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳು ಗುಲಾಬಿ ದೀಪಗಳ ಬೆಳಕಿನಲ್ಲಿ ಮಿನುಗಲಿವೆ.
ಭಾನುವಾರ (ಆಗಸ್ಟ್ 30) ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಈ ಎಲ್ಲಾ ಪ್ರಮುಖ ತಾಣಗಳು ಮತ್ತು ಸ್ಮಾರಕಗಳು ಪಿಂಕ್ ಬೆಳಕಿನಿಂದ ಕಂಗೊಳಿಸಲಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಈ ಸೌಂದರ್ಯವನ್ನು ಕಣ್ಣುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.


