ಶಿವಮೊಗ್ಗ: ಬಿಜೆಪಿ ನಾಯಕರ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿರುವ ಹಿರಿಯ ರಾಜಕಾರಣಿ ಕೆ.ಎಸ್. ಈಶ್ವರಪ್ಪ, 2028ರ ವಿಧಾನಸಭಾ ಚುನಾವಣೆಯಲ್ಲಿ ತಾವು ಅಥವಾ ತಮ್ಮ ಮಗ ಖಚಿತವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್ ನೀಡದೆ ಬಿಜೆಪಿ ನಾಯಕರು ಅನ್ಯಾಯ ಮಾಡಿದ್ದಾರೆ.
ಈ ಬೇಸರ ತಮಗೆ ಇನ್ನೂ ಹಸಿರಾಗಿದೆ ಎಂದು ಹೇಳಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ. ವಿಜಯೇಂದ್ರ ಹಾಗೂ ಬಿ.ವೈ. ರಾಘವೇಂದ್ರ ಅವರಿಗೆ ಅವಕಾಶ ನೀಡಲಾಗಿದೆ, ಅಲ್ಲದೆ ಮಾಜಿ ಸಿಎಂ ಬೊಮ್ಮಾಯಿ ಅವರ ಪುತ್ರನಿಗೂ ಟಿಕೆಟ್ ಸಿಕ್ಕಿದೆ, ಆದರೆ ತಮ್ಮ ಮಗನಿಗೆ ಮಾತ್ರ ಟಿಕೆಟ್ ತಪ್ಪಿಸಿ ಮೋಸ ಮಾಡಲಾಯಿತು ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ತಮ್ಮ ಮುಂದಿನ ರಾಜಕೀಯ ನಡೆ ಸ್ಪಷ್ಟಪಡಿಸಿದ ಈಶ್ವರಪ್ಪ, 2028ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಾವಾಗಲಿ ಅಥವಾ ತಮ್ಮ ಮಗನಾಗಲಿ ಕಣಕ್ಕಿಳಿಯುವುದು ಶೇ.100 ರಷ್ಟು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಬಿಜೆಪಿಯಲ್ಲಿನ ಪ್ರಸ್ತುತ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಪಕ್ಷದಲ್ಲಿ ಇನ್ನೂ ಅನೇಕ ನಾಯಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು.
ಪ್ರಸ್ತುತ ಬಿಜೆಪಿ ಒಳಗೆ ಹಲವು ಗಂಭೀರ ಸಮಸ್ಯೆಗಳಿದ್ದು, ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿ ಚುನಾವಣೆಗೆ ಹೋದರೆ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಪಕ್ಷಕ್ಕೆ ಇನ್ನು ಹೆಚ್ಚಿನ ಸಂಘಟನೆಯ ಅಗತ್ಯವಿದೆ ಎಂದಿರುವ ಅವರು, ಈ ಎಲ್ಲಾ ವಿಚಾರಗಳಲ್ಲಿ ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವನ್ನು ತಾವು ಕಾದು ನೋಡುತ್ತಿರುವುದಾಗಿ ತಿಳಿಸಿದ್ದಾರೆ.


