ತೆಲಂಗಾಣ : ಅದೊಂದು ಕಾಲವಿತ್ತು… 'ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಗುರುವನ್ನೇ ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಿದ್ದ ದಿನಗಳು.
ಆದರೆ ಕಾಲ ಬದಲಾಗಿದೆ; ಅದೇ ಗುರುಗಳ ಮೇಲೆ ಕೈ ಎತ್ತುವ, ಕೊನೆಗೆ ಚಾಕುವಿನಿಂದ ಇರಿದು ಕೊಲ್ಲುವಷ್ಟು ವಿದ್ಯಾರ್ಥಿಗಳ ಮನಸ್ಥಿತಿ ವಿಕೃತವಾಗುತ್ತಿರುವ ಘಟನೆಗಳು ಆತಂಕ ಮೂಡಿಸುತ್ತಿವೆ.
ತೆಲಂಗಾಣದಲ್ಲಿ ಶಾಲಾ ಪ್ರಾಂಶುಪಾಲೆಯನ್ನೇ ವಿದ್ಯಾರ್ಥಿಗಳು 27 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಪ್ರಕರಣ, ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಬಿದ್ದಿರುವ ಕಹಿ ಕಳಂಕಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಹೌದು..ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ 48 ವರ್ಷದ ಶಾಲಾ ಪ್ರಾಂಶುಪಾಲೆ ಹಾಗೂ ನಾಗಾರ್ಜುನ ಪಬ್ಲಿಕ್ ಸ್ಕೂಲ್‌ನ ನಿರ್ದೇಶಕಿ ಕಲ್ಲು ರೂಪಾ ರೆಡ್ಡಿ ಅವರನ್ನು 27 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹಣ ಹಾಗೂ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕೃತ್ಯ ಎಸಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 12ರಂದು ಕೊಂಡಮಲ್ಲೇಪಲ್ಲಿಯಲ್ಲಿರುವ ತಮ್ಮ ನಿವಾಸದಲ್ಲಿ ರೂಪಾ ರೆಡ್ಡಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಪತಿ ಹೈದರಾಬಾದ್‌ನಲ್ಲಿದ್ದು, ಪತ್ನಿಯ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು. ಬಳಿಕ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿತ್ತು.
ಪ್ರಕರಣದ ತನಿಖೆಗಾಗಿ ಪೊಲೀಸರು ಐದು ತಂಡಗಳನ್ನು ರಚಿಸಿದ್ದರು. ಸಿಸಿಟಿವಿ ದೃಶ್ಯಗಳು, ವಿಧಿವಿಜ್ಞಾನ ಸಾಕ್ಷ್ಯಗಳು, ಬೆರಳಚ್ಚು, ತಾಂತ್ರಿಕ ಮಾಹಿತಿ ಹಾಗೂ ಶಂಕಿತರ ಚಲನವಲನಗಳನ್ನು ಪರಿಶೀಲಿಸಿ, 80ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದರು.
'ಬಾಬು' ಎಂಬ ಪದದಿಂದ ಸಿಕ್ಕಿತು ಮಹತ್ವದ ಸುಳಿವು
ತನಿಖೆಯ ವೇಳೆ ರೂಪಾ ರೆಡ್ಡಿ ತಮ್ಮ ಅತ್ತೆಯೊಂದಿಗೆ ಮಾತನಾಡಿದ್ದ ಕೊನೆಯ ಕರೆಯಲ್ಲಿ 'ಬಾಬು' ಎಂಬ ಪದ ಬಳಸಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಕರೆ ಸ್ಥಗಿತಗೊಂಡ ಬಳಿಕ ಅವರ ಫೋನ್ ಸ್ವಿಚ್ ಆಫ್ ಆಗಿತ್ತು.


