ಬೆಂಗಳೂರು: ಜೀವಗಳನ್ನು ಉಳಿಸಬೇಕಾದ ಪಶುವೈದ್ಯಕೀಯ ವಿದ್ಯಾರ್ಥಿ ಅಮಾಯಕ ಬೀದಿ ನಾಯಿಯ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಹೆಬ್ಬಾಳ ಸರ್ಕಾರಿ ಪಶುವೈದ್ಯಕೀಯ ಕಾಲೇಜಿನ ದ್ವಿತೀಯ ವರ್ಷದ ಮಾಸ್ಟರ್ ಆಫ್ ವೆಟರಿನರಿ ಸೈನ್ಸ್ (MVSc) ವಿದ್ಯಾರ್ಥಿ ಮಂಜುನಾಥ್, ತನ್ನ ವೈದ್ಯಕೀಯ ಅಭ್ಯಾಸಕ್ಕಾಗಿ ಆರೋಗ್ಯವಾಗಿದ್ದ ನಾಯಿಯ ಕಾಲನ್ನು ಉದ್ದೇಶಪೂರ್ವಕವಾಗಿ ಮುರಿದು, ಬಳಿಕ ಅದಕ್ಕೆ ಚಿಕಿತ್ಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಖಾಸಗಿ ವ್ಯಕ್ತಿಗಳ ಮೂಲಕ ಬೀದಿ ನಾಯಿಗಳನ್ನು ಹಿಡಿಸಿಕೊಂಡು, ಖಾಸಗಿ ಆಸ್ಪತ್ರೆಯಲ್ಲಿ ನಾಯಿಯ ಕಾಲನ್ನು ಮುರಿದು, ನಂತರ ಅದೇ ನಾಯಿಯನ್ನು ಹೆಬ್ಬಾಳದ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ನಡೆಸಿ ವೈದ್ಯಕೀಯ ಅಭ್ಯಾಸ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಸಂಶೋಧನೆಯ ನೆಪದಲ್ಲಿ ಕ್ರೌರ್ಯ: ಹೆಬ್ಬಾಳ ವೆಟರಿನರಿ ಕಾಲೇಜಿನಲ್ಲಿ ಆರ್ಥೋಪೆಡಿಕ್ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದ ವಿದ್ಯಾರ್ಥಿ ಮಂಜುನಾಥ್, ತನ್ನ ಸರ್ಜರಿ ಅಭ್ಯಾಸಕ್ಕಾಗಿ ಬೀದಿ ನಾಯಿಗಳನ್ನು ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.
QR ಕಾಲರ್‌ನಿಂದ ಬಯಲಾದ ಪ್ರಕರಣ
ಕೆಲ ದಿನಗಳ ಹಿಂದೆ ಬೆಂಗಳೂರಿನ ದೊಡ್ಡಕಣ್ಣಹಳ್ಳಿ ಪ್ರದೇಶದಲ್ಲಿ ಒಂದು ಬೀದಿ ನಾಯಿ ಕಾಣೆಯಾಗಿತ್ತು. ನಾಯಿಗೆ ಆಹಾರ ನೀಡುತ್ತಿದ್ದವರು ಅದರ ಕುತ್ತಿಗೆಗೆ QR ಕೋಡ್ ಇರುವ ಕಾಲರ್ ಹಾಕಿದ್ದರು.
ನಾಯಿ ಕಾಣೆಯಾದ ಬಳಿಕ QR ಕೋಡ್ ಮೂಲಕ ಅದನ್ನು ಹುಡುಕಿದಾಗ, ಅದೇ ಪ್ರದೇಶದಲ್ಲಿರುವ PrimeCare Veterinary Hospitalಗೆ ನಾಯಿ ಹೋಗಿರುವುದು ಪತ್ತೆಯಾಗಿದೆ.


