ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ರಾಜಕೀಯದಲ್ಲಿ ದಿಢೀರ್ ಸಂಚಲನ ಉಂಟಾಗಿದ್ದು, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಸೌಮ್ಯ ರೆಡ್ಡಿ (Soumya Reddy) ಅವರು ತಮ್ಮ ಹುದ್ದೆಗೆ (Breaking News) ರಾಜೀನಾಮೆ ನೀಡಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಒಬ್ಬರೇ ಒಬ್ಬರು ಮಹಿಳಾ ಸಚಿವರಿಲ್ಲದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ತಮ್ಮ ಹುದ್ದೆಯನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.
ಎಐಸಿಸಿ ಮಹಿಳಾ ಅಧ್ಯಕ್ಷೆಗೆ ರಾಜೀನಾಮೆ ಪತ್ರ ರವಾನೆ
ಶನಿವಾರದಂದು ಸೌಮ್ಯ ರೆಡ್ಡಿ ಅವರು ತಮ್ಮ ಅಧಿಕೃತ ರಾಜೀನಾಮೆ ಪತ್ರವನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಅವರಿಗೆ ರವಾನಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಜವಾಬ್ದಾರಿ ನಿಭಾಯಿಸಿದ್ದನ್ನು ಸ್ಮರಿಸಿರುವ ಅವರು, "ರಾಜ್ಯಾದ್ಯಂತ ಸುದೀರ್ಘ ಪ್ರವಾಸ ಕೈಗೊಂಡು ಮಹಿಳೆಯರ ಆರೋಗ್ಯ, ಶಿಕ್ಷಣ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸಲು ಅವಕಾಶ ಸಿಕ್ಕಿದ್ದು ನನ್ನ ಸುಯೋಗ. ಮಹಿಳೆಯರನ್ನು ಪಕ್ಷದತ್ತ ಆಕರ್ಷಿಸಲು ಹಾಗೂ ಸಂಘಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


