ಬೆಳಗಾವಿ: ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ (Farmers Protest) ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಜೈಲ್ ಭರೋ ಚಳವಳಿಗೆ ತೆರಳುತ್ತಿದ್ದ ರೈತರನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದು, ಈ ವೇಳೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೈತರೊಬ್ಬರು ಪೊಲೀಸ್ ವಾಹನದಲ್ಲೇ ಅಸ್ವಸ್ಥಗೊಂಡಿದ್ದಾರೆ.
ಆದರೆ, ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿದರೂ ಪೊಲೀಸರು ಸ್ಪಂದಿಸದೆ ಅವರನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬೆಳಗಾವಿಯ ಮುಕ್ತಿ ಮಠದಿಂದ ಗೋಕಾಕ್ ಕಡೆಗೆ ಪೊಲೀಸ್ ವಾಹನದಲ್ಲಿ ರೈತರನ್ನು ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ವಾಹನದಲ್ಲಿದ್ದ ರೈತರೊಬ್ಬರಿಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದೆ.
ಅಸ್ವಸ್ಥಗೊಂಡ ರೈತನಿಗೆ ಈ ಹಿಂದೆ ಹೃದಯ ಶಸ್ತ್ರಚಿಕಿತ್ಸೆ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಸಹ ರೈತರು ಆತಂಕಗೊಂಡಿದ್ದಾರೆ.
ತಕ್ಷಣ ವಾಹನ ನಿಲ್ಲಿಸಿ ಅಸ್ವಸ್ಥ ರೈತನನ್ನು ಆಸ್ಪತ್ರೆಗೆ ದಾಖಲಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಆದರೆ, ರೈತರ ಆರೋಪದ ಪ್ರಕಾರ, ಆಸ್ಪತ್ರೆಗೆ ಕರೆದೊಯ್ಯುವ ಬದಲು ಬಸಾಪುರ ಗ್ರಾಮದ ಸಮೀಪದ ನಿರ್ಜನ ಪ್ರದೇಶದಲ್ಲಿ ರೈತನನ್ನು ಇಳಿಸಿ ಪೊಲೀಸರು ಅಲ್ಲಿಂದ ತೆರಳಿದ್ದಾರೆ.


