ಬೆಂಗಳೂರು: ನಮ್ಮ ಸಚಿವ ಸಂಪುಟದಲ್ಲಿ ಮಹಿಳೆಗೆ ಸ್ಥಾನ ಇದ್ದೇ ಇರುತ್ತದೆ. ನಾವು ಮಹಿಳೆಯರಿಗೆ ಹೆಚ್ಚು ಶಕ್ತಿ ನೀಡುತ್ತೇವೆ ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ತಿಳಿಸಿದರು.
ವಿಧಾನಸೌಧ ಆವರಣದಲ್ಲಿ ಎಸ್ ನಿಜಲಿಂಗಪ್ಪ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಅವರು ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಚರ್ಚೆ ಮಾಡಿದ್ದಕ್ಕೆ ಕಿರಣ್ ರಿಜಿಜು ಅವರು ಕರ್ನಾಟಕ ಸಚಿವ ಸಂಪುಟದಲ್ಲಿ ಮಹಿಳೆಯರಿಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, "ಈ ಮಸೂದೆಯನ್ನು ರೂಪಿಸಿ, ಲೋಕಸಭೆಯಲ್ಲಿ ಪಾಸ್ ಮಾಡಿದ್ದವರು ಕಾಂಗ್ರೆಸ್ ನವರು. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಾವು ಮಹಿಳೆಯರಿಗೆ ಹೆಚ್ಚು ಸ್ಥಾನ ನೀಡಿದ್ದೆವು.
ಸಧ್ಯದಲ್ಲೇ ಸಂಪುಟ ವಿಸ್ತರಣೆ ವಿಚಾರ ಬಗೆಹರಿಯಲಿದೆ. ರಿಜಿಜು ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತಿಸುವುದು ಬೇಡ, ಅವರು ತಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆ ಆಲೋಚಿಸಲಿ" ಎಂದರು. ದೆಹಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದಾಗ, "ಹೋಗಲೇಬೇಕಲ್ಲವೆ, ನಿಮಗೆ ಮಾಹಿತಿ ನೀಡಿಯೇ ಹೋಗುತ್ತೇವೆ" ಎಂದರು.


