ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆಯಾಗಿದ್ದು, ಸಿಡಿಲಿನ ಆರ್ಭಟಕ್ಕೆ ಮೂವರು ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ರಾಯಚೂರು, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಸಿಡಿಲು ಬಡಿದು ಮೂವರು ಮೃತಪಟ್ಟಿದ್ದು, ಏಳು ಜನ ಗಾಯಗೊಂಡಿದ್ದಾರೆ.
ಮುಂಗಾರು ಅಂತ್ಯದಲ್ಲಿ ರಾಜ್ಯದ ಕೆಲವು ಕಡೆ ಮಳೆ ಆಗುತ್ತಿದ್ದು, ಗುರುವಾರ ಸಿಡಿಲಬ್ಬರದ ಮಳೆಯಾಗಿ ಮೂವರು ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಐಹೊಳೆಯಲ್ಲಿ ಹೊಲದಲ್ಲಿ ಸೂರ್ಯಕಾಂತಿ ರಾಶಿ ಮಾಡಲು ಹೋಗಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಆರು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಾಟಾಪುರದ ಭರಮಪ್ಪ ಯಲ್ಲಪ್ಪ ಖಂಡೇಕರ(25), ಐಹೊಳೆಯ ರಾಮವ್ವ ದ್ಯಾಮಪ್ಪ ಹೊಳಗಿ(65) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸುಲ್ತಾನಪುರ ಗ್ರಾಮದ ತೆಗ್ಗಿನ ಕ್ಯಾಂಪ್ ನಲ್ಲಿ ಜಮೀನಿನಲ್ಲಿ ಜೋಳ ಬಿತ್ತನೆ ಮಾಡುವಾಗ ಸಿಡಿಲು ಬಡಿದು 35 ವರ್ಷದ ದ್ಯಾವಣ್ಣ ಮೃತಪಟ್ಟಿದ್ದಾರೆ. ಅಯ್ಯಪ್ಪ ಯಮನಪ್ಪ ಭೋವಿ(50) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.


