ಬೆಂಗಳೂರು: ಕೌಶಲ್ಯ ಎಂದರೆ ಜ್ಞಾನಿಗಳ, ಸಾಧಕರ ಸಂಗಮ. ಕೌಶಲ್ಯವನ್ನು ಯಾರೂ ಕದಿಯಲು ಆಗುವುದಿಲ್ಲ. ಇಲ್ಲಿನ ಯುವಕರ ಕೌಶಲ್ಯದಿಂದ ಕರ್ನಾಟಕ ವಿಶ್ವದಲ್ಲೇ ಹೊಸ ಸಂಶೋಧನೆಯ ತವರೂರಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್,ದೇಶದಲ್ಲಿ ಪ್ರಜ್ಞಾವಂತರು ಹೆಚ್ಚಾಗಬೇಕು ಎಂದರೆ ವಿದ್ಯೆಯ ಜೊತೆಗೆ ಕೌಶಲ್ಯ ಇರಬೇಕು.
ಕೌಶಲ್ಯ ಇದ್ದರೆ ರಾಜಯೋಗ ಇದ್ದಂತೆ. ಇದನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ಎಂಜಿನಿಯರ್ ಗಳಿದ್ದರೆ, ನಮ್ಮ ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರಿದ್ದಾರೆ. ಕರ್ನಾಟಕ ಕೌಶಲ್ಯದ ತವರು ಎಂದರು.
ನೃಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಕೌಶಲ್ಯ ವಿದ್ಯೆ. ಪ್ರತಿಯೊಬ್ಬರಲ್ಲೂ ಕೌಶಲ್ಯ ಇರುತ್ತದೆ.
ಅಕ್ಕಸಾಲಿಗ, ಮರಗೆಲಸ ಸೇರಿದಂತೆ ಅನೇಕ ಕೌಶಲ್ಯಯುತ ಕೆಲಸಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಯಾವ ತಂತ್ರಜ್ಞಾನ ಇಲ್ಲದೇ ಇದ್ದ ಹೊತ್ತಿನಲ್ಲೂ ಖೈದಿಗಳನ್ನು ಬಳಸಿ ವಿಧಾನಸೌಧ ಕಟ್ಟಲಾಯಿತು. ಅವರಲ್ಲೂ ಕೌಶಲ್ಯ ಇತ್ತು. ಪ್ರತಿಯೊಬ್ಬರ ಮನುಷ್ಯನಲ್ಲೂ ಕೌಶಲ್ಯ ಇದ್ದೇ ಇರುತ್ತದೆ” ಎಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.
ಇಂದು ಟಾಟಾ, ಮಹೀಂದ್ರಾದಂಥ ದೊಡ್ಡ ಕೈಗಾರಿಕೆ ನಡೆಸುತ್ತಿರುವ ಉದ್ಯಮಿಗಳು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ಇಲ್ಲಿ ಕೌಶಲ್ಯ ಪಡೆದು ವಿಶ್ವದಾದ್ಯಂತ ತಮ್ಮ ಕೈಗಾರಿಕಾ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ.
ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಹೀಗೆ ನಮ್ಮ ನಮ್ಮಲ್ಲಿ ಸ್ಪರ್ಧೆ ನಡೆಸುವುದಲ್ಲ. ನೀವು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನಡೆಸಬೇಕು ಎಂದು ಹೇಳಿದರು.


