ಮೈಸೂರು: ಎಥೆನಾಲ್ ಮಿಶ್ರಣದ ವಿಚಾರದಲ್ಲಿ ಸಚಿವ ರಿಜ್ವಾನ್ ಅರ್ಷದ್ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಥೆನಾಲ್ ಉತ್ಪಾದನೆ ಬಿಜೆಪಿ ಸರ್ಕಾರ ಬಂದ ಮೇಲೆ ಆರಂಭವಾದದ್ದಲ್ಲ; ಬದಲಾಗಿ ಮೈಸೂರು ಮಹಾರಾಜರ ಕಾಲದಲ್ಲೇ ಇದಕ್ಕೆ ಚಾಲನೆ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತ ದೇಶದಲ್ಲಿ 500 ಎಥೆನಾಲ್ ಉತ್ಪಾದನಾ ಕೇಂದ್ರಗಳಿದ್ದು, ಪ್ರತಿವರ್ಷ 1,200 ಕೋಟಿ ಲೀಟರ್ ಎಥೆನಾಲ್ ಅನ್ನು ಕೇವಲ ಪೆಟ್ರೋಲ್‌ಗೆ ಮಾತ್ರ ಮಿಶ್ರಣ ಮಾಡಲಾಗುತ್ತಿದೆಯೇ ಹೊರತು ಡೀಸೆಲ್‌ಗೆ ಮಿಶ್ರಣ ಮಾಡುತ್ತಿಲ್ಲ, ಅಲ್ಲದೆ ಪೆಟ್ರೋಲ್ ಬಂಕ್‌ಗಳಿಗೆ ಇದರಿಂದ ಯಾವುದೇ ಹೆಚ್ಚಿನ ಲಾಭವಿಲ್ಲ ಎಂದು ವಿವರಿಸಿದರು.
ಇದೇ ವೇಳೆ ಸಚಿವ ರಿಜ್ವಾನ್ ಅರ್ಷದ್ ಅವರ ಆರೋಪಗಳಿಗೆ ನೇರ ಸವಾಲು ಹಾಕಿದ ನಿರಾಣಿ, "ಸಚಿವರು ಯಾವ ಪೆಟ್ರೋಲಿಯಂ ಟರ್ಮಿನಲ್‌ನಿಂದ ಸ್ಯಾಂಪಲ್ ತೆಗೆದಿದ್ದಾರೆ ಮತ್ತು ಆ ಸಂದರ್ಭದಲ್ಲಿ ಯಾವೆಲ್ಲಾ ಅಧಿಕಾರಿಗಳು ಹಾಜರಿದ್ದರು ಎಂಬುದನ್ನು ಬಹಿರಂಗಪಡಿಸಲಿ" ಎಂದು ಆಗ್ರಹಿಸಿದರು.
ಸುಮ್ಮನೆ ಆರೋಪಗಳನ್ನು ಮಾಡುತ್ತಾ ತಪ್ಪಿಸಿಕೊಳ್ಳುವ ಬದಲು, ಸ್ಯಾಂಪಲ್ ಪರೀಕ್ಷೆಗಾಗಿ ಸಚಿವರು ತಕ್ಷಣವೇ ಒಂದು ಸಮಿತಿಯನ್ನು ರಚನೆ ಮಾಡಲಿ ಎಂದು ಅವರು ಒತ್ತಾಯಿಸಿದರು.


