ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ರಾಜ್ಯದ ವಿಧಾನಸಭಾ ಚುನಾವಣಾ ಫಲಿತಾಂಶಗಳಲ್ಲಿ ಅಭೂತಪೂರ್ವ ಮುನ್ನಡೆ ಸಾಧಿಸಿದೆ.
ಆರಂಭಿಕ ಹಂತದಿಂದಲೇ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಟಿ ವಿ ಕೆ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದು, ರಾಜ್ಯದ ಎರಡು ಪ್ರಮುಖ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗೆ ನಡುಕ ಹುಟ್ಟಿಸಿದ್ದಾರೆ.
ಸ್ವತಂತ್ರವಾಗಿ ಅಧಿಕಾರ ಹಿಡಿಯುವ ವಿಶ್ವಾಸ ಚುನಾವಣಾ ಟ್ರೆಂಡ್ ಬಗ್ಗೆ ಪ್ರತಿಕ್ರಿಯಿಸಿರುವ ಟಿ ವಿ ಕೆ ಪಕ್ಷದ ಹಿರಿಯ ಮುಖಂಡರು, ತಮಿಳುನಾಡಿನಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. "ನಾವು ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸುವುದು ಈಗ ಸ್ಪಷ್ಟವಾಗಿದೆ.
ಯಾವುದೇ ಮೈತ್ರಿಯ ಹಂಗಿಲ್ಲದೆ ತಮಿಳುನಾಡಿನಲ್ಲಿ ಸ್ವತಂತ್ರವಾಗಿ ಸರ್ಕಾರ ರಚಿಸುತ್ತೇವೆ," ಎಂದು ಪಕ್ಷದ ಮೂಲಗಳು ಅಧಿಕೃತವಾಗಿ ಘೋಷಣೆ ಮಾಡಿವೆ. ಈ ಘೋಷಣೆಯು ವಿಜಯ್ ಅಭಿಮಾನಿಗಳಲ್ಲಿ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.
ಸಂಭ್ರಮಾಚರಣೆಯಲ್ಲಿ ಅಭಿಮಾನಿಗಳು ಪಕ್ಷವು ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಂತೆಯೇ ತಮಿಳುನಾಡಿನಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿದೆ.
ಚೆನ್ನೈ, ಮಧುರೈ, ಕೊಯಮತ್ತೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಿಜಯ್ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸುತ್ತಿದ್ದಾರೆ. 'ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ವಿಜಯ್' ಎಂಬ ಘೋಷಣೆಗಳು ರಾಜ್ಯದಾದ್ಯಂತ ಮೊಳಗುತ್ತಿವೆ.

