ಬೆಂಗಳೂರು,: ಕರ್ನಾಟಕ ಯುವ ಕಾಂಗ್ರೆಸ್‌ನಲ್ಲಿ ಸಂಘಟನಾ ಶಿಸ್ತು ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ 15 ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಜವಾಬ್ದಾರಿಗಳಿಂದ ತಾತ್ಕಾಲಿಕವಾಗಿ ಮುಕ್ತಗೊಳಿಸಲಾಗಿದೆ.
ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ ಎಂಟು ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಲವು ಕಾರ್ಯದರ್ಶಿಗಳ ವಿರುದ್ಧ ಭಾರತೀಯ ಯುವ ಕಾಂಗ್ರೆಸ್ ಈ ಶಿಸ್ತು ಕ್ರಮ ಕೈಗೊಂಡಿದೆ.
ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸದಿರುವುದು, ಕಡ್ಡಾಯ ಸಭೆಗಳಿಗೆ ಹಾಜರಾಗದಿರುವುದು ಹಾಗೂ ಕರ್ತವ್ಯ ಲೋಪವೆಸಗಿರುವುದು ಈ ಕ್ರಮಕ್ಕೆ ಕಾರಣವಾಗಿದೆ ಎಂದು ಹೈಕಮಾಂಡ್ ಮೂಲಗಳು ತಿಳಿಸಿವೆ.
ಪಕ್ಷದ ನಿಯಮಗಳ ಪ್ರಕಾರ, ಪದಾಧಿಕಾರಿಗಳು ಸಂಘಟನಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಹಾಗೂ ನಾಯಕತ್ವ ಗುಣ ಪ್ರದರ್ಶಿಸುವುದು ಕಡ್ಡಾಯವಾಗಿದೆ.
ಆದರೆ ಪರಿಶೀಲನೆಯ ವೇಳೆ ಸಂಬಂಧಿತ ಪದಾಧಿಕಾರಿಗಳು ದೀರ್ಘಕಾಲದಿಂದ ನಿಷ್ಕ್ರಿಯರಾಗಿದ್ದರು ಎಂಬುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಸಂಘಟನೆಯ ಹಿತದೃಷ್ಟಿಯಿಂದ ತಾತ್ಕಾಲಿಕ ವಜಾ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ಆದೇಶದಲ್ಲಿ ತಿಳಿಸಲಾಗಿದೆ.

