ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಮಾಕ್ಷಿಪಾಳ್ಯ ಠಾಣೆ ಪೋಲಿಸರು ಮೂವರನ್ನು ಬಂಧಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿಯಾಗಿರುವ ಸಂದೀಪ್ ಎಂಬುವರಿಗೆ ಸಾಕ್ಷ್ಯ ಹೇಳದಂತೆ ಬೆದರಿಕೆ ಹಾಕಲಾಗಿತ್ತು.
ಈ ಬಗ್ಗೆ ಸಾಕ್ಷಿದಾರ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡಿದ್ದು, ಸಾಕ್ಷಿಗೆ ರಕ್ಷಣೆ ನೀಡಿ ಬೆದರಿಕೆ ಹಾಕಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.
ಕಾರ್ಯಾಚರಣೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸರು ವೇಣು, ಸುಹಾಸ್ ಮತ್ತು ಪುನೀತ್ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪುನೀತ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಡಿ ಕಂಪನಿ ಫ್ಯಾನ್ಸ್ ಪೇಜ್ ನಿರ್ವಹಿಸುತ್ತಿದ್ದ. ಉಳಿದ ಆರೋಪಿಗಳು ತುಮಕೂರಿನ ದರ್ಶನ್ ಅಭಿಮಾನಿಗಳ ಸಂಘದ ಸದಸ್ಯರಾಗಿದ್ದಾರೆ.
ಸಾಕ್ಷಿದಾರ ಸಂದೀಪ್ ಜೊತೆಗೆ ಮಾತನಾಡುವ ನೆಪದಲ್ಲಿ ಬಲವಂತವಾಗಿ ಕಾರ್ ನಲ್ಲಿ ಕೂರಿಸಿಕೊಂಡು ಸುತ್ತಾಡಿಸಿದ್ದರು. ದರ್ಶನ್ ವಿರುದ್ಧ ಸಾಕ್ಷ್ಯ ಹೇಳದಂತೆ ಒತ್ತಡ ಹೇರಿ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.


