ಅಮೆರಿಕಾದ ರಾಂಡಿ ಗುಯಿಜಾರೊ ಎಂಬ ವ್ಯಕ್ತಿ ಒಂದು ಹಳೆಯ ಫೋಟೋವನ್ನು ಕೇವಲ ಎರಡು ಡಾಲರ್ (ಅಂದಾಜು 173 ರೂಪಾಯಿ) ಗೆ ಖರೀದಿಸಿದ್ದು, ಆದರೆ ವರ್ಷಗಳ ನಂತರ, ಆ ಫೋಟೋದಲ್ಲಿರುವವರು ಅಮೆರಿಕದ ಇತಿಹಾಸದಲ್ಲಿ ಬಹಳ ಪ್ರಸಿದ್ಧ ವ್ಯಕ್ತಿ ಎಂದು ತಿಳಿದು ಬಂದಾಗ ಅವರ ಆಶ್ಚರ್ಯಕ್ಕೆ ಪರಿಮಿತಿಯೇ ಇರಲಿಲ್ಲ.ಆ ಫೋಟೋವನ್ನು ಹರಾಜಿನಲ್ಲಿ ಹಾಕಿದಾಗ ಅದು ಕೋಟ್ಯಂತರ ರೂಪಾಯಿಗೆ ಮಾರಾಟವಾಯಿತು.
ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದ ರಾಂಡಿ ಗುಯಿಜಾರೊ 2010ರಲ್ಲಿ ಕ್ಯಾಲಿಫೋರ್ನಿಯಾದ ಫ್ರೆಸ್ನೋದಲ್ಲಿರುವ ಒಂದು ಪ್ರಾಚೀನ ವಸ್ತುಗಳ ಅಂಗಡಿಗೆ ಭೇಟಿ ನೀಡಿದ್ದರು.
ಅಲ್ಲಿ ಅವರಿಗೆ ಮೂರು ಹಳೆಯ ಫೋಟೋ ನೆಗೆಟಿವ್‌ಗಳು ಸಿಕ್ಕವು. ಅವುಗಳನ್ನು ಖರೀದಿಸಲು ಹಿಂಜರಿದಿದ್ದರೂ, ಕೊನೆಯಲ್ಲಿ ತಮ್ಮ ಬಳಿಯಿದ್ದ ಕೊಂಚ ಹಣದಿಂದ ಆ ಫೋಟೋಗಳನ್ನು ಖರೀದಿಸಿದರು.
ಆ ಫೋಟೋಗಳಲ್ಲಿ ಒಂದು ಫೋಟೋ ಅವರ ಗಮನ ಸೆಳೆಯಿತು. ಅದರಲ್ಲಿರುವ ವ್ಯಕ್ತಿಯ ಮುಖ ಅವರಿಗೆ ಸ್ವಲ್ಪ ಪರಿಚಿತವಾಗಿತ್ತು. ಕುತೂಹಲದಿಂದ ಆ ಫೋಟೋವನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಫೋಟೋಗ್ರಫಿ ತಜ್ಞರಿಗೆ ತೋರಿಸಿದರು.
ತಜ್ಞರು ಆ ಫೋಟೋ ʼಬಿಲ್ಲಿ ದ ಕಿಡ್ʼ ಎಂಬ 19ನೇ ಶತಮಾನದ ಕುಖ್ಯಾತ ಅಮೆರಿಕನ್ ವ್ಯಕ್ತಿಯದ್ದು ಎಂದು ಹೇಳಿದರು. ʼಬಿಲ್ಲಿ ದ ಕಿಡ್ʼ ನ ಅಧಿಕೃತವಾಗಿ ಪರಿಶೀಲಿಸಲಾದ ಎರಡನೇ ಚಿತ್ರ ಇದಾಗಿದೆ.
ʼಬಿಲ್ಲಿ ದ ಕಿಡ್ʼ ಎಂಬ ನಿಜವಾದ ಹೆಸರು ಹೆನ್ರಿ ಮ್ಯಾಕಾರ್ಟಿ ಅಥವಾ ವಿಲಿಯಂ ಎಚ್. ಬೋನಿ. 1859ರಲ್ಲಿ ಜನಿಸಿದ ಅವರು 1881ರಲ್ಲಿ ನಿಧನರಾದರು. ಕುಖ್ಯಾತ ಕಳ್ಳ ಮತ್ತು ಗನ್‌ಮ್ಯಾನ್ ಆಗಿದ್ದ ಅವನ ಮೇಲೆ ಒಂಬತ್ತು ಕೊಲೆ ಆರೋಪವಿತ್ತು.
ತನ್ನ ಅಪರಾಧ ಕೃತ್ಯಗಳ ಹೊರತಾಗಿಯೂ, ಅವನಿಗೆ ಅಮೆರಿಕದಲ್ಲಿ ದೊಡ್ಡ ಅಭಿಮಾನಿ ವರ್ಗವಿತ್ತು ಮತ್ತು ಅವನನ್ನು ಒಂದು ರೀತಿಯ ಜನಪ್ರಿಯ ನಾಯಕನಂತೆ ನೋಡಲಾಗುತ್ತಿತ್ತು.
1878ರಲ್ಲಿ ತೆಗೆದ ಈ ಫೋಟೋವನ್ನು ಆರಂಭದಲ್ಲಿ 2 ಮಿಲಿಯನ್ ಡಾಲರ್‌ಗೆ ಮತ್ತು ನಂತರ 5 ಮಿಲಿಯನ್ ಡಾಲರ್‌ಗೆ (ಸುಮಾರು 43 ಕೋಟಿ ರೂಪಾಯಿ) ನಿಗದಿ ಮಾಡಲಾಯಿತು. ಅಂತಿಮವಾಗಿ, ಒಬ್ಬ ಖಾಸಗಿ ಸಂಗ್ರಾಹಕ ಆ ಫೋಟೋವನ್ನು ನಿಗದಿತ ಬೆಲೆಗೆ ಖರೀದಿಸಿದ್ದು, ಇದರಿಂದ ರಾಂಡಿ ಗುಯಿಜಾರೊನ ಜೀವನವೇ ಬದಲಾಯಿತು.