ಬೆಳಗಾವಿ: ಪಾಲಕರು ಮೊಬೈಲ್ ಫೋನ್ ನೀಡದ್ದಕ್ಕೆ ಬೇಸರಗೊಂಡ 10ನೇ ತರಗತಿ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿಪ್ಪಾಣಿ ತಾಲೂಕಿನ ಸಿದ್ನಾಳ ಗ್ರಾಮದಲ್ಲಿ ನಡೆದಿದೆ.
ಸಿದ್ನಾಳ ಗ್ರಾಮದ ರುತೇಶ ವಿಜಯ ನಲವಡೆ(16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.ಅಕ್ಕೋಳ ಗ್ರಾಮದಲ್ಲಿನ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ರುತೇಶ, ಮೊಬೈಲ್ ಕೊಡಿಸುವಂತೆ ಪಾಲಕರಿಗೆ ಕೇಳಿದ್ದ. ಆದರೆ, ಇದಕ್ಕೆ ಒಪ್ಪದ ಪೋಷಕರು, ಮೊದಲಿಗೆ 10ನೇ ತರಗತಿ ಪರೀಕ್ಷೆಯನ್ನು ಮುಗಿಸು. ಓದು ಬಹಳ ಮುಖ್ಯ. ಹಾಗಾಗಿ ಪರೀಕ್ಷೆ ಮುಗಿದ ನಂತರ ಮೊಬೈಲ್ ಕೊಡಿಸುತ್ತೇವೆ ಎಂಬುದಾಗಿ ತಿಳಿ ಹೇಳಿದ್ದರು.
ಆದರೆ, ಇದರಿಂದ ತೀವ್ರ ಬೇಸರಗೊಂಡಿದ್ದ ಬಾಲಕ ಸಂಜೆ ಹೊತ್ತಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಪ್ಪಾಣಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




