ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹಗರಣ ರಹಿತವಾಗಿ ಖಾಲಿ ಹುದ್ದೆಗಳನ್ನು ತುಂಬಬೇಕು ಎಂದು ಕೆಲಸ ಮಾಡುತ್ತಿದೆ.
ಯುವಕರು ಧೈರ್ಯವಾಗಿರಿ. ನಾವು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ನಿಮಗೆ ಸಂದೇಶವನ್ನು ನೀಡುತ್ತೇವೆ.
ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ, ಮಾಡುತ್ತೇವೆ, ಇದಕ್ಕೆ ಬದ್ಧವಾಗಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಯ ನೀಡಿದರು.
ನಗರದ ನೆಹರೂ ತಾರಾಲಯದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.
ಧಾರವಾಡದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಯುವಕರ ಪ್ರತಿಭಟನೆ ಬಗ್ಗೆ ಕೇಳಿದಾಗ, “ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆಗಲಿಲ್ಲ. ಅವರ ಸಮಯದಲ್ಲಿ ಬಹಳಷ್ಟು ಹಗರಣಗಳಾದವು.
ನಮಗೆ ಯುವಕರ ನೋವು ಅರ್ಥವಾಗುತ್ತದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಇದು ನಮ್ಮ ಆದ್ಯತೆ” ಎಂದು ಹೇಳಿದರು.
“ಹುದ್ದೆಗಳ ಭರ್ತಿ ಕುರಿತು ಯೋಜನೆ ತಯಾರಿಸಿದ್ದೇವೆ. ಕೆಪಿಎಸ್ ಸಿ ಸೇರಿದಂತೆ ಬೇರೆ ಸಂಸ್ಥೆಗಳಿಗೆ ಹುದ್ದೆ ಭರ್ತಿಗೆ ಜವಾಬ್ದಾರಿ ನೀಡಿದ್ದೇವೆ. ಶಿಕ್ಷಕರ ಹುದ್ದೆ, ಆರೋಗ್ಯ ಇಲಾಖೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಒಳಮೀಸಲಾತಿ ವಿಚಾರಕ್ಕೆ ಒಂದಷ್ಟು ಅಡಚಣೆಗಳು ಬರುತ್ತಿದೆ. ನಿರುದ್ಯೋಗಿ ಯುವಕರಿಗೆ ಶಕ್ತಿ ಬರಲಿ ಎಂದೇ ಯುವನಿಧಿ ಯೋಜನೆ ಜಾರಿಗೆ ತಂದಿದ್ದೇವೆ” ಎಂದು ತಿಳಿಸಿದರು.




