Ad imageAd image

ಹುಟ್ಟುಹಬ್ಬದ ನೆಪದಲ್ಲಿ ಡಿಕೆಶಿ ಬಣದ 18 ಶಾಸಕರ ರಹಸ್ಯ ಸಭೆ

Bharath Vaibhav
ಹುಟ್ಟುಹಬ್ಬದ ನೆಪದಲ್ಲಿ ಡಿಕೆಶಿ ಬಣದ 18 ಶಾಸಕರ ರಹಸ್ಯ ಸಭೆ
WhatsApp Group Join Now
Telegram Group Join Now

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ವಿದೇಶ ಪ್ರವಾಸದಲ್ಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿಗ ಶಾಸಕರು ಹುಟ್ಟುಹಬ್ಬದ ನೆಪದಲ್ಲಿ ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ರಹಸ್ಯ ಸಭೆ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ.

ಫೆಬ್ರವರಿ 26ರ ರಾತ್ರಿ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಶಾಸಕರು ಖಾಸಗಿ ಹೋಟೆಲ್‌ನಲ್ಲಿ ಡಿನ್ನರ್ ಮೀಟಿಂಗ್ ನಡೆಸಿದರು. ಈ ಸಭೆಯಲ್ಲಿ 18 ಶಾಸಕರು ಪಾಲ್ಗೊಂಡಿದ್ದರು ಎಂಬ ಮಾಹಿತಿ ಸದ್ಯಕ್ಕೆ ಇದೆ. 80ಕ್ಕೂ ಹೆಚ್ಚು ಶಾಸಕರಿಗೆ ಆಹ್ವಾನ ನೀಡಲಾಗಿತ್ತು.

ಆದರೆ 40ಕ್ಕೂ ಅಧಿಕ ಶಾಸಕರು ಆಗಮಿಸಿದ್ದರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ನಾಯಕತ್ವ ಬದಲಾವಣೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವಾಗಲೇ ಶಾಸಕರ ಈ ಡಿನ್ನರ್ ಮೀಟಿಂಗ್ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಅದರಲ್ಲೂ ಡಿ.ಕೆ.ಶಿವಕುಮಾರ್ ಬಣದ ಸಚಿವರು, ಶಾಸಕರು ಮಾತ್ರ ಒಂದು ಕಡೆ ಸೇರಿ ಸಭೆ ನಡೆಸಿದ್ದು, ಅಗತ್ಯಬಿದ್ದರೆ ದೆಹಲಿಗೆ ಹೋಗೋಣ ಎಂದು ತೀರ್ಮಾನ ಕೈಗೊಂಡಿದ್ದು, ರಾಜ್ಯ ರಾಜಕೀಯದ ಲೆಕ್ಕಾಚಾರವನ್ನು ಬದಲಾಯಿಸಿದೆ.

ಯಾವ-ಯಾವ ಶಾಸಕರು: ಹೆಚ್.ಸಿ.ಬಾಲಕೃಷ್ಣ ಅವರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಫೋಟೋ ಪ್ರಕಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಡಿನ್ನರ್ ಮೀಟಿಂಗ್‌ನಲ್ಲಿ ಸಚಿವ ಮಂಕಾಳ್ ವೈದ್ಯ, ಡಿ.ಸುಧಾಕರ್ ಇದ್ದಾರೆ.

ಶಾಸಕರಾದ ನಯನ ಮೋಟಮ್ಮ, ಡಾ.ರಂಗನಾಥ್, ಸಿ.ಪಿ.ಯೋಗೇಶ್ವರ, ಬಸವರಾಜ್ ಶಿವಗಂಗಾ, ಡಿ.ಜಿ.ಶಾಂತನಗೌಡ ಮುಂತಾದವರನ್ನು ಕಾಣಬಹುದು. ಆದರೆ ಹಲವು ಶಾಸಕರು ಫೋಟೋದಲ್ಲಿ ಇಲ್ಲ, ಆದರೆ ಸಭೆಗೆ ಆಗಮಿಸಿದ್ದರು ಎಂಬ ಮಾಹಿತಿ ಇದೆ.

ಈ ಸಭೆಯ ಕುರಿತು ಶಾಸಕ ಬಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ, “ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ನಿಲ್ಲಬೇಕು. ಕೆಪಿಸಿಸಿ ಅಧ್ಯಕ್ಷರನ್ನು ಬೇಕಾದರೆ ಬದಲಾವಣೆ ಮಾಡಲಿ. ಇಲ್ಲದೇ ಹೋದಲ್ಲಿ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಅಧಿಕಾರ ಸಿಗುವುದು ಕಷ್ಟವಾಗಬಹುದು. ಒಂದಿಷ್ಟು ಬದಲಾವಣೆಗಳ ಕುರಿತು ಮಾತನಾಡಿದ್ದೇವೆ” ಎಂದು ಹೇಳಿದ್ದಾರೆ.

ಮಾರ್ಚ್‌ 6ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮೊದಲು ದೆಹಲಿಯಲ್ಲಿ ಅಥವ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಬಣದ ಶಾಸಕರ ಶಕ್ತಿ ಪ್ರದರ್ಶನ ಮಾಡಲು ತಯಾರಿ ನಡೆದಿದೆ ಎಂಬ ಮಾಹಿತಿಯೂ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸುಮಾರು 22 ಶಾಸಕರು ವಿದೇಶದ ಪ್ರವೇಶದಲ್ಲಿದ್ದಾರೆ. ಅವರು ಮಾರ್ಚ್‌ 2ರಂದು ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ.

ಇತ್ತ ಡಿ.ಕೆ.ಶಿವಕುಮಾರ್ ಬಣದ ಶಾಸಕರ ಡಿನ್ನರ್ ಮೀಟಿಂಗ್ ತೀವ್ರ ಚರ್ಚೆಗೆ ಕಾರಣವಾಗಿದೆ. ಹೈಕಮಾಂಡ್ ನಾಯಕರು ಹೇಳಿದಂತೆ ನಾವು ಕೇಳುತ್ತೇವೆ ಎಂದು ಪದೇ ಪದೇ ಹೇಳುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತಮ್ಮ ಬಣದ ಶಾಸಕರ ಚಟುವಟಿಕೆಗಳನ್ನು ತಡೆಯಲು ಏಕೆ ಮುಂದಾಗುತ್ತಿಲ್ಲ? ಎಂಬ ಪ್ರಶ್ನೆ ಎದ್ದಿದೆ.

ಡಿ.ಕೆ.ಶಿವಕುಮಾರ್ ಈ ಸಭೆಯ ಕುರಿತು ಇಲ್ಲಿಯ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಜೋರಾಗಿದೆ ಎಂಬುದು ಈ ಡಿನ್ನರ್ ಮೀಟಿಂಗ್ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!