ಶಿಗ್ಗಾಂವಿ: ಹತ್ತಾರು ಕನಸುಗಳನ್ನು ಕಂಡು, ನೂರು ಕಾಲ ಸುಖವಾಗಿ ಬಾಳಬೇಕೆಂದು ಹಸೆಮಣೆ ಏರಿದ್ದ ಆ ಜೋಡಿಗೆ ವಿಧಿಯ ಆಟ ಬೇರೆಯೇ ಇತ್ತು.
ಮದುವೆಯ ಸಂಭ್ರಮದ ಕಳೆ ಇನ್ನೂ ಮಾಸುವ ಮುನ್ನವೇ, ವಿಧಿಯಾಟಕ್ಕೆ ನವದಂಪತಿ ಬಲಿಯಾಗಿರುವ ಕರುಣಾಜನಕ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ: ಬೆಳ್ಳಂಬೆಳಗ್ಗೆ ಸಂಭವಿಸಿದ ದುರಂತ
ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ಭಾನುವಾರ ಮುಂಜಾನೆ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹಾವೇರಿಯ ಹಿರಿಯ ಪತ್ರಕರ್ತ ದಿವಂಗತ ಗಂಗಾಧರ ಹೂಹಾರ ಅವರ ಪುತ್ರ ಕಾರ್ತಿಕ್ ಹೂಗಾರ್ (33) ಹಾಗೂ ಅವರ ಪತ್ನಿ ಐಶ್ವರ್ಯ (26) ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು. ಫೆಬ್ರವರಿ 13ರಂದು ಇವರಿಬ್ಬರ ವಿವಾಹವು ಹಾವೇರಿಯಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಮದುವೆಯಾಗಿ ಕೇವಲ 15 ದಿನಗಳು ಕಳೆಯುವಷ್ಟರಲ್ಲಿ ಈ ದುರಂತ ಸಂಭವಿಸಿರುವುದು ಕುಟುಂಬಸ್ಥರನ್ನು ಆಘಾತಕ್ಕೆ ದೂಡಿದೆ.
ದೈವದರ್ಶನ ಮುಗಿಸಿ ಬರುವಾಗ ಎದುರಾದ ಮೃತ್ಯು
ಶನಿವಾರ ರಾತ್ರಿ ನವದಂಪತಿಗಳು ನವಲಗುಂದದ ಪ್ರಸಿದ್ಧ ರಾಮಲಿಂಗೇಶ್ವರ ಕಾಮಣ್ಣನ ದರ್ಶನ ಪಡೆಯಲು ತೆರಳಿದ್ದರು. ದೇವರ ದರ್ಶನ ಮುಗಿಸಿ ನಸುಕಿನ ಜಾವ ಕಾರಿನಲ್ಲಿ ಹಾವೇರಿಗೆ ವಾಪಸ್ ಬರುತ್ತಿದ್ದಾಗ, ಕಡಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಬದಿಯಲ್ಲಿ ನಿಂತಿದ್ದಲಾರಿಗೆ ಇವರ ಕಾರು ಅತೀ ವೇಗವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರ್ತಿಕ್ ಮತ್ತು ಐಶ್ವರ್ಯ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಇತರ ಇಬ್ಬರು ಗಾಯಗೊಂಡಿದ್ದು, ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾವೇರಿಯಲ್ಲಿ ಮೌನ, ಕುಟುಂಬದಲ್ಲಿ ಆಕ್ರಂದನ
ಮೃತ ಕಾರ್ತಿಕ್ ಹೂಗಾರ್ ಅವರು ಹಾವೇರಿಯ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿದ್ದ ದಿ. ಗಂಗಾಧರ ಹೂಹಾರ ಅವರ ಪುತ್ರರಾಗಿದ್ದರು. ಮಗನ ಮದುವೆಯ ಸಡಗರದಲ್ಲಿದ್ದ ಕುಟುಂಬಕ್ಕೆ ಈಗ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ.
ಹಾವೇರಿ ನಗರದಾದ್ಯಂತ ಈ ಘಟನೆಯಿಂದಾಗಿ ಶೋಕದ ಛಾಯೆ ಆವರಿಸಿದೆ. ಹಸೆಮಣೆ ಏರಿದ್ದ ಜೋಡಿ ಈಗ ಚಿತೆಯನ್ನೇರುತ್ತಿರುವುದು ನೆರೆಹೊರೆಯವರ ಕಣ್ಣಲ್ಲಿ ನೀರು ತರಿಸಿದೆ.
ಪೊಲೀಸ್ ತನಿಖೆ ಮತ್ತು ಪ್ರಕರಣ ದಾಖಲು
ಘಟನಾ ಸ್ಥಳಕ್ಕೆ ತಡಸ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಬದಿಯಲ್ಲಿ ಅಕ್ರಮವಾಗಿ ಅಥವಾ ಅಜಾಗರೂಕತೆಯಿಂದ ಲಾರಿ ನಿಲ್ಲಿಸಿದ್ದೇ ಈ ಅಪಘಾತಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.




