ಎ. 18 ಕ್ಕೆ ಬೈಕ್ ರ್ಯಾಲಿ, 19ಕ್ಕೆ ಆರೋಗ್ಯ ತಪಾಸಣೆ, 20 ಕ್ಕೆ ಮೆರವಣಿಗೆ ಆಚರಣೆ
ಭಾಲ್ಕಿ : ಪಟ್ಟಣದ ಚನ್ನಬಸವಾಶ್ರಮದಲ್ಲಿ ಎ.20 ರಿಂದ ನಡೆಯುವ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ-2026, ಡಾ.ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ ಮತ್ತು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಅಂಗವಾಗಿ ನಡೆಯುವ ಎಲ್ಲ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುವುದು ಎಂದು ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

ಪ್ರಪಥಮ ಬಾರಿಗೆ ವಿಶ್ವಕ್ಕೆ ಸಂಸತ್ತಿನ ಪರಿಕಲ್ಪನೆ ಕೊಟ್ಟಿದ್ದು ವಿಶ್ವಗುರು ಬಸವಣ್ಣನವರ ನೇತೃತ್ವದ 12ನೇ ಶತಮಾನದ ಶಿವಶರಣರಿಂದ ನಡೆದ ಅನುಭವ ಮಂಟಪ. ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ಈಗಲೂ ಜಗತ್ತಿನಾದ್ಯಂತ ಮನ್ನಣೆ ದೊರೆಯುತ್ತಿದೆ. ಡಾ. ಚನ್ನಬಸವ ಪಟ್ಟದ್ದೇವರ ತ್ಯಾಗದ ಫಲದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಭಾಷೆ ಮತ್ತು ಗಡಿ ಪ್ರದೇಶ ನಮ್ಮಲ್ಲಿಯೆ ಉಳಿದಿದೆ. ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳಿಂದ ಈ ಭಾಗ ಆಧ್ಯಾತ್ಮೀಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ಯಾರು ಮರೆಯುವಂತಿಲ್ಲ. 03 ದಿವಸ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಂಡು ಶೋಭೆ ತರಬೇಕು ಎಂದು ಹೇಳಿದರು.
ಮೆರವಣಿಗೆ ಸಮಿತಿ ಅಧ್ಯಕ್ಷ ಯೋಗೇಶ ಅಷ್ಟೂರೆ ಮಾತನಾಡಿ, ಎಪ್ರೀಲ್ 18 ರಂದು ಪಟ್ಟಣದ ಚನ್ನಬಸವಾಶ್ರಮದಿಂದ ಮುಂಜಾನೆ 10 ಗಂಟೆಗೆ ಹೊರಡುವ ಬೈಕ್ ಮತ್ತು ಕಾರ್ ರ್ಯಾಲಿಗೆ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಸಂಸದ ಸಾಗರ ಖಂಡ್ರೆ ಮತ್ತು ಯುವನಾಯಕ ಪ್ರಸನ್ ಖಂಡ್ರೆ ಚಾಲನೆ ನೀಡಲಿದ್ದಾರೆ. ರ್ಯಾಲಿಯು ಪಟ್ಟಣದ ಪ್ರಮುಖ ವೃತ್ತಗಳು ಸೇರಿದಂತೆ ಹಳೇ ಭಾಲ್ಕಿಯ ವಿವಿಧ ಓಣಿಗಳ ಮೂಲಕ ಮರಳಿ ಚನ್ನಬಸವಾಶ್ರಮದಲ್ಲಿ ತಲುಪಿ ಸಮಾವೇಶಗೊಳ್ಳುವುದು. ಎ.20 ಕ್ಕೆ ಮದ್ಯಾಹ್ನ 3:00 ಗಂಟೆಗೆ ನಡೆಯುವ ಭವ್ಯ ಮೆರವಣಿಗೆ ಹಿರೇಮಠ ಸಂಸ್ಥಾನದಿAದ ಆರಂಭಗೊಂಡು ಪ್ರಮುಖ ಚೌಕ್ಗಳ ಮೂಲಕ ಚನ್ನಬಸವಾಶ್ರಮದಲ್ಲಿ ಕೊನೆಗೊಳ್ಳುವುದು. ಮೆರವಣಿಗೆಯಲ್ಲಿ ಪೂನಾದ ಡೋಲ್ ಬಾರಿಸುವ ಕಲಾವಿದರನ್ನು ಕರೆಸಲಾಗುತ್ತಿದೆ ಎಂದು ತಿಳಿಸಿದರು. ಡಾ. ಸಜ್ಜಲ ಬಳತೆ ಮಾತನಾಡಿ, ಎ. 19 ರಂದು ಮುಂಜಾನೆ 10 ಗಂಟೆಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗುತ್ತಿದೆ. ಅರ್ಥೊ, ಡೆಂಟಲ್ ಸೇರಿದಂತೆ 06 ನುರಿತ ವೈದ್ಯರಿಂದ ಚಿಕಿತ್ಸೆ ನೀಡಿ ಉಚಿತ ಔಷಧ ವಿತರಿಸಲಾಗುತ್ತಿದೆ. ಅದೇ ದಿನ ರಕ್ತದಾನ ಶಿಬಿರ ಚನ್ನಬಸವಾಶ್ರಮದ ಆವರಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವು ಲೋಖಂಡೆ, ಡಾ.ಅಮೀತ ಅಷ್ಟೂರೆ, ಡಾ.ಅನೀಲ ಸುಕಾಳೆ , ಜೈರಾಜ ಪಾತ್ರೆ, ಪ್ರಕಾಶ ಮಾಶಟ್ಟೆ, ಆಕಾಶ ರಿಕ್ಕೆ, ಟಿಂಕು ರಾಜಭವನ, ಮಹಾಂತೇಶ ದಶಮುಖೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಸಂತೋಷ ಬಿಜಿ ಪಾಟೀಲ




