ಸಿರುಗುಪ್ಪ : ನಗರದ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ನಡೆದ ಭಾರತರತ್ನ ಸಂವಿಧಾನ ಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಹಾಗೂ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ, ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ 119ನೇ ಕಾರ್ಯಕ್ರಮವನ್ನು ಶಾಸಕ ಬಿ.ಎಮ್.ನಾಗರಾಜ ಅವರು ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ತಾಲೂಕಾಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷೆ, ತಹಶೀಲ್ದಾರ್ ಗೌಸಿಯಾ ಬೇಗಂ ಅವರು ದೇಶಕಂಡ ಮಹಾನ್ ಚೇತನ ಅಂಬೇಡ್ಕರರ ಜಯಂತಿಯ ಈ ದಿನವನ್ನು ಜ್ಞಾನ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹಬ್ಬವಾಗಿ ಗೌರವಯುತವಾಗಿ ನಮ್ಮ ತಾಲೂಕಿನಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ತಾಲೂಕು ಕ್ರೀಡಾಂಗಣದವರೆಗೂ ರಾಜಬೀದಿಯಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ಸುಮಂಗಲೆಯರು ಕಳಸವನ್ನು ಹೊತ್ತು ಮೆರಗು ತಂದರು. ವಿವಿಧ ವಾದ್ಯಗಳೊಂದಿಗೆ ಯುವಕರು ನೀಲಿ ಬಾವುಟಗಳನ್ನು ಹಿಡಿದು ಜೈಭೀಮ್ ಎಂದು ಜೈಕಾರ ಹಾಕುತ್ತಾ ಸಾಗಿದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪ್ರತಿಜ್ಞಾವಿಧಿ ಭೋಧನೆ ಮಾಡಲಾಯಿತು. ಚಂದ್ರಶೇಖರ್, ದೊಡ್ಡ ಹುಸೇನಪ್ಪ ಅವರ ಸಂಗಡಿಗರಿಂದ ನಾಡಗೀತೆ ಮತ್ತು ಪ್ರತಿಜ್ಞಾಗೀತೆ ಗಾಯನ ಜರುಗಿತು.
ತೆಕ್ಕಲಕೋಟೆಯ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ದೊಡ್ಡಬಸಪ್ಪ ಹೆಚ್ ಅವರು ಮುಖ್ಯ ಭಾಷಣವನ್ನು ನೀಡಿದರು.
ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಇನ್ನಿತರ ಸಮುದಾಯಗಳ ತಾಲೂಕಾಧ್ಯಕ್ಷರು ವೇದಿಕೆಯನ್ನು ಹಂಚಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾದರು.
ಇದೇ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ.




