ಬೆಳಗಾವಿ : ನವೀಲುತೀರ್ಥ ಜಲಾಶಯದ ಬಳಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ನಡೆದಿದೆ.
ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದ ಬಳಿ ಕಲ್ಯಾಣ ಶೆಟ್ಟಿ ಅಸೋಸಿಯೇಷನ್‌ಗೆ ಸೇರಿದ ಗಣಿಗಾರಿಕೆ ಪ್ರದೇಶದಲ್ಲಿ ಗಣಿಗಾರಿಕೆಗಾಗಿ 11 ಕೆವಿ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು.
ಇದೇ ಸ್ಥಳದಲ್ಲಿ ಹಿಟ್ಯಾಚ್ ಜೆಸಿಬಿಯಿಂದ ಕೆಲಸ ಮಾಡುತ್ತಿದ್ದ ವೇಳೆ, ಯಂತ್ರದ ಬಕೆಟ್ ವಿದ್ಯುತ್ ತಂತಿಗೆ ತಗುಲಿದೆ. ಕರೆಂಟ್ ಪ್ರವಹಿಸುತ್ತಿದ್ದಂತೆ ಕಾರ್ಮಿಕರಿಬ್ಬರು ಜೀವ ಉಳಿಸಿಕೊಳ್ಳಲು ನೀರಿಗೆ ಧುಮುಕಿದ್ದಾರೆ. ಆದರೆ ವಿದ್ಯುತ್ ನೀರಿನಲ್ಲಿಯೂ ಪ್ರವಹಿಸಿದ ಪರಿಣಾಮ ಇಬ್ಬರೂ ಸಾವನ್ನಪ್ಪಿದದಾರೆ.
ಮೃತ ಕಾರ್ಮಿಕರನ್ನು ಜಾರ್ಖಂಡ ಮೂಲದ ರವಿಕುಮಾರ ಸಿಂಗ್ (18) ಹಾಗೂ ಸುಭಾಷ ಸಿಂಗ್ (18) ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.




