ಸಿರುಗುಪ್ಪ :– ನಗರದ ತಾಲೂಕು ಪಂಚಾಯಿತಿ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ ತಾಲೂಕು ಸಮಿತಿಯಿಂದ ಬಿಸಿಯೂಟ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ತಾಲೂಕು ಪಂಚಾಯಿತಿ ವ್ಯವಸ್ಥಾಪಕಿ ಸುಜಾತ ಅವರ ಮೂಲಕ ಇ.ಓ ಅವರಿಗೆ ಮನವಿ ಸಲ್ಲಿಸಲಾಯಿತು.
ಬಿಸಿಯೂಟ ಕಾರ್ಮಿಕರ ಸಂಘದ ಜಿಲ್ಲಾ ಸಲಹೆಗಾರರಾದ ನಾಗರತ್ನ.ಎಸ್.ಜಿ ಅವರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಷ್ಠಿತ ಮದ್ಯಾಹ್ನ ಬಿಸಿಯೂಟ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ತಯಾರಿಸುವವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕಳೆದ ಏಪ್ರಿಲ್ ಮತ್ತು ಮೇ ತಿಂಗಳುಗಳ ಬಾಕಿಯಿರುವ ಗೌರವಧನವನ್ನು ಕೂಡಲೇ ಪಾವತಿಸಬೇಕು. ಮೊಟ್ಟೆ ಸುಲಿದ ಕೂಲಿ ಹಣವನ್ನು ಬಿಸಿಯೂಟ ಕಾರ್ಮಿಕರಿಗೆ ಖಾತ್ರಿ ಮಾಡಬೇಕು.ಬಿಸಿಯೂಟ ತಯಾರಿ, ಬಡಿಸುವುದು ಹೊರತುಪಡಿಸಿ ಹೆಚ್ಚುವರಿ ಕೆಲಸಗಳ ಒತ್ತಡವನ್ನು ಹೇರದಂತೆ ಸಭೆ ಕರೆದು ಶಾಲೆಗಳ ಮುಖ್ಯಸ್ಥರಿಗೆ ಮಾಗದರ್ಶನ ಮಾಡಬೇಕು.
ಇಸ್ಕಾನ್ ಅಕ್ಷಯ ಪಾತ್ರೆಯಂತಹ ಕೇಂದ್ರೀಕೃತ ಅಡುಗೆ ವ್ಯವಸ್ಥೆಗೆ ಬಿಸಿಯೂಟದ ವ್ಯವಸ್ಥೆಯನ್ನು ನೀಡದೇ ಆಯಾ ಶಾಲೆಗಳಲ್ಲೇ ತಯಾರಿಕೆಗೆ ಅನುವು ಮಾಡಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸೇವೆಯನ್ನು ಸುಭದ್ರಗೊಳಿಸಬೇಕು.
ಮಕ್ಕಳ ಸಂಖ್ಯೆಯ ಕೊರತೆಯ ನೆಪದಿಂದ ಕಾರ್ಯಕರ್ತೆಯರನ್ನು ಮನೆಗೆ ಕಳುಹಿಸದೇ ಬೇರೆ ಶಾಲೆಗೆ ಕೆಲಸಕ್ಕೆ ನಿಯೋಜಿಸಬೇಕು.ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನವನ್ನು ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಅಡುಗೆ ತಯಾರಿಸುವ ಕಾರ್ಮಿಕರಿಗೆ ಸುರಕ್ಷತಾ ಸಾಮಗ್ರಿಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ತಾಲೂಕು ಸಮಿತಿಯ ಅಧ್ಯಕ್ಷ ಸುರೇಶ.ಜಿ, ಉಪಾಧ್ಯಕ್ಷೆಯರಾದ ಲಕ್ಷ್ಮಿ, ರುದ್ರಮ್ಮ, ಕಾರ್ಯದರ್ಶಿ ಗೀತಾ ಸಿರಿಗೇರಿ, ಸದಸ್ಯರಾದ ವಿಜಯಲಕ್ಷ್ಮಿ, ಶೇಖಮ್ಮ, ಶಿವಮ್ಮ, ಸುಮಂಗಲಮ್ಮ, ಶೇಖನ್‌ಬಿ, ಇನ್ನಿತರರಿದ್ದರು.
ವರದಿ : ಶ್ರೀನಿವಾಸ ನಾಯ್ಕ