ನವದೆಹಲಿ: ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಇಂದು ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.
ಈ ವರ್ಷ ಅಖಿಲ ಭಾರತೀಯ ವರ್ತಕರ ಒಕ್ಕೂಟ (CAIT) ದೇಶಾದ್ಯಂತ ಸುಮಾರು ₹20,000 ಕೋಟಿ ರೂಪಾಯಿಗಳ ಮೌಲ್ಯದ ಚಿನ್ನಾಭರಣ ಮಾರಾಟವಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ.
ಮಾರಾಟದಲ್ಲಿ ಏರಿಕೆ: ಕಳೆದ ವರ್ಷ ಅಕ್ಷಯ ತೃತೀಯದಂದು ಸುಮಾರು ₹16,000 ಕೋಟಿ ಮೌಲ್ಯದ ವಹಿವಾಟು ನಡೆದಿತ್ತು. ಈ ಬಾರಿ ಆ ಮೊತ್ತ ₹20,000 ಕೋಟಿಗೆ ಏರುವ ಸಾಧ್ಯತೆಯಿದೆ.
ಟನ್ ಲೆಕ್ಕದಲ್ಲಿ ಮಾರಾಟ: ಈ ವಿಶೇಷ ದಿನದಂದು ದೇಶಾದ್ಯಂತ ಸುಮಾರು 10 ಟನ್ ಚಿನ್ನ ಮತ್ತು 157 ಟನ್ ಬೆಳ್ಳಿ ಮಾರಾಟವಾಗುವ ಅಂದಾಜಿದೆ.
ಬೆಲೆ ಏರಿಕೆಯ ನಡುವೆಯೂ ಬೇಡಿಕೆ: ಚಿನ್ನದ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 25% ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 10 ಗ್ರಾಂ ಚಿನ್ನದ ಬೆಲೆ ಸುಮಾರು 1 ಲಕ್ಷ ರೂ. ಇತ್ತು, ಈ ಬಾರಿ ಅದು 1.58ಲಕ್ಷ ರೂ. ದಾಟಿದೆ. ಆದರೂ ಗ್ರಾಹಕರಲ್ಲಿ ಖರೀದಿ ಉತ್ಸಾಹ ಕಡಿಮೆಯಾಗಿಲ್ಲ.
ಬೆಳ್ಳಿ ಬೆಲೆ: ಬೆಳ್ಳಿಯ ಬೆಲೆ ಕೂಡ ಗಣನೀಯವಾಗಿ ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ ₹85,000 ಇದ್ದದ್ದು, ಇದೀಗ 2.55 ಲಕ್ಷ ರೂ. ತಲುಪಿದೆ.
ಗ್ರಾಹಕರಲ್ಲಿ ಹಬ್ಬದ ಸಂಭ್ರಮ:
ಸೋಮವಾರವಾದ ಇಂದು ಮುಂಜಾನೆಯಿಂದಲೇ ಜ್ಯುವೆಲ್ಲರಿ ಮಳಿಗೆಗಳ ಮುಂದೆ ಜನಜಂಗುಳಿ ಕಂಡುಬರುತ್ತಿದೆ. ಅಕ್ಷಯ ತೃತೀಯದಂದು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದ ನಾಣ್ಯಗಳಿಂದ ಹಿಡಿದು ಭಾರೀ ಆಭರಣಗಳವರೆಗೆ ವಿವಿಧ ಮಾದರಿಯ ವಸ್ತುಗಳನ್ನು ಜನರು ಖರೀದಿಸುತ್ತಿದ್ದಾರೆ.
ವ್ಯಾಪಾರಿಗಳ ಪ್ರಕಾರ, ಈ ಬಾರಿ ಆಭರಣಗಳ ಜೊತೆಗೆ ‘ಡಿಜಿಟಲ್ ಗೋಲ್ಡ್’ ಮತ್ತು ಗೋಲ್ಡ್ ಇಟಿಎಫ್ಗಳ ಮೇಲೆಯೂ ಹೂಡಿಕೆದಾರರು ಆಸಕ್ತಿ ತೋರಿಸುತ್ತಿದ್ದಾರೆ. ಒಟ್ಟಾರೆಯಾಗಿ, ಬೆಲೆ ಏರಿಕೆಯ ಬಿಸಿಯ ನಡುವೆಯೂ ಅಕ್ಷಯ ತೃತೀಯದ ನಿಮಿತ್ತ ಮಾರುಕಟ್ಟೆಯಲ್ಲಿ ಹಬ್ಬದ ಕಳೆ ಮನೆಮಾಡಿದೆ.




