Ad imageAd image

ಭಾರೀ ಮಳೆ ಕಾರಣ ಯೆಲ್ಲೋ ಅಲರ್ಟ್ ಘೋಷಣೆ, ಜನತೆ ಎಚ್ಚರದಿಂದಿರಿ : ಕುಂಇ. ಅಹಮದ್

Bharath Vaibhav
ಭಾರೀ ಮಳೆ ಕಾರಣ ಯೆಲ್ಲೋ ಅಲರ್ಟ್ ಘೋಷಣೆ, ಜನತೆ ಎಚ್ಚರದಿಂದಿರಿ : ಕುಂಇ. ಅಹಮದ್
WhatsApp Group Join Now
Telegram Group Join Now

ತುರುವೇಕೆರೆ:- ಭಾರತೀಯ ಹವಾಮಾನ ಇಲಾಖೆ ವರದಿಯಂತೆ ಜಿಲ್ಲೆಯಲ್ಲಿ ಮುಂದಿನ ಆರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಅದರಂತೆ ತುರುವೇಕೆರೆ ತಾಲ್ಲೂಕಿನ ಜನತೆ ಎಚ್ಚರಿಕೆಯಿಂದ ಇರುವಂತೆ ತಹಸೀಲ್ದಾರ್ ಕುಂ.ಇ. ಅಹಮದ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 04 ರಿಂದ 10 ರವರೆಗೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಕಾರಣ ಜಿಲ್ಲಾಧಿಕಾರಿಗಳು ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಈ ತುರ್ತು ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ತಾಲ್ಲೂಕು ಆಡಳಿತ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ. ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಕೇಂದ್ರ ಸ್ಥಾನವನ್ನು ತೊರೆಯದೆ ಜನರ ರಕ್ಷಣೆಯ ಬಗ್ಗೆ ಗಮನಹರಿಸಬೇಕೆಂದರು.

ಕೆರೆಕಟ್ಟೆಗಳಲ್ಲಿ ಮಳೆಯಿಂದ ನೀರು ಅ|ಧಿಕವಾಗಿ ಶೇಖರಣೆಗೊಂಡು ಕಾಲು ಜಾರಿ ಅನಾಹುತ ಸಂಭವಿಸುವ ಸಾಧ್ಯತೆಗಳು ದಟ್ಟವಾಗಿರುವ ಕಾರಣ ಗ್ರಾಮೀಣ ಪ್ರದೇಶದಲ್ಲಿ ಜನತೆ ಹಳ್ಳ, ಕೆರೆ ದಡಗಳಲ್ಲಿ ಬಟ್ಟೆ ಒಗೆಯುವುದು, ಈಜಾಡುವುದು, ದನಕರುಗಳನ್ನು ಮೇಯಿಸುವುದು ಹಾಗೂ ಅಪಾಯವಿರುವ ಸೇತುವೆಗಳ ಮೇಲೆ ಸಂಚರಿಸುವುದನ್ನು ಮಾಡಬಾರದು. ಯುವಕ, ಯುವತಿಯರು ನೀರಿನ ಆಕರ್ಷಣೆಗೆ ಒಳಗಾಗಿ ಸೆಲ್ಪೀ ತೆಗೆದುಕೊಳ್ಳುವುದು, ಈಜಾಡುವುದು, ನೀರಿನಲ್ಲಿ ಆಟವಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಮುಂದಿನ ಆರು ದಿನಗಳ ಕಾಲ ಹೆಚ್ಚು ಮಳೆಯಾಗುವುದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರವಹಿಸಬೇಕಿದೆ ಎಂದರು.

ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆಯಾಗಿರುವ ಕಾರಣ ತುರುವೇಕೆರೆ ಪಟ್ಟಣ ಸೇರಿದಂತೆ ಪ್ರತಿ ಹಳ್ಳಿಯಲ್ಲಿ ಕೆರೆಕಟ್ಟೆಗಳ ಬಳಿ ತೆರಳದಂತೆ ಹಾಗೂ ಹಳೇ ಕಟ್ಟಡಗಳು ಮಳೆಗಾಳಿಗೆ ಬೀಳುವ ಸಾಧ್ಯತೆ ಇರುವುದರಿಂದ ಅದರಿಂದ ದೂರವಿರುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆರೆಕಟ್ಟೆಗಳ ಬಳಿಯ ತೋಟಗಳಲ್ಲಿ ವಾಸವಿರುವ ಕುಟುಂಬದವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ ಎಂದ ಅವರು, ತಾಲ್ಲೂಕಿನಲ್ಲಿ ಮುಂದಿನ ಆರು ದಿನಗಳಲ್ಲಿ ಯಾವುದೇ ಮಳೆಹಾನಿ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಘಟನೆ ಸಂಭವಿಸಿದರೆ ಕೂಡಲೇ ನಾಗರೀಕರು ಸಹಾಯವಾಣೀ ಸಂಖ್ಯೆ 08139-287325 ಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದರು.

ಈಗಾಗಲೇ ತುರುವೇಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ಹೊಣಕೆರೆ ಗೊಲ್ಲರಹಟ್ಟಿ ಹಾಗೂ ದಬ್ಬೇಘಟ್ಟ ಹೋಬಳಿಯ ಮೇಲನಹಳ್ಳಿ ಗ್ರಾಮಗಳಲ್ಲಿ ಮಳೆಗೆ ಮನೆ ಭಾಗಶಃ ಹಾನಿಯಾಗಿದೆ. ಈ ಕುರಿತು ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಪರಿಹಾರ ಒದಗಿಸಲಾಗುವುದು ಎಂದ ಅವರು, ಮಳೆ ಹಾನಿಗೆ ಮನೆ ಕುಸಿತ, ಜಾನುವರು ಹಾನಿಯಾದರೆ ಎನ್.ಡಿ.ಆರ್.ಎಫ್. ಅನುದಾನದಿಂದ ಪರಿಹಾರ ನೀಡಲಾಗುವುದು ಎಂದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
Share This Article
error: Content is protected !!