ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಮಹಿಳೆಯರು ಇದೀಗ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಈ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿಕೆಯೊಂದನ್ನು ನೀಡುವ ಮೂಲಕ ಉಲ್ಟಾ ಹೊಡೆದಿದ್ದಾರೆ.
ಕಾಂಗ್ರೆಸ್ ಸಾಧನಾ ಸಮಾವೇಶದ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಡಿಕೆಶಿ ಮಾತನಾಡುತ್ತಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ ಸರ್ ಎಂದು ಕೇಳಿದ್ದಾರೆ.
ಇದಕ್ಕುತ್ತರಿಸಿದ ಡಿಕೆಶಿ, ನಾವು ಎಲ್ಲಿಯೂ ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳೂ ಕೊಡ್ತೀವಿ ಅಂತ ಹೇಳಿಲ್ಲ. ನೀವು ಟ್ಯಾಕ್ಸ್ ಕಟ್ಟುತ್ತಾ ಇರಬೇಕು. ನಾವು ದುಡ್ಡು ಕೊಡುತ್ತಾ ಇರಬೇಕು ಎಂದಿದ್ದಾರೆ.
ಗುತ್ತಿಗೆ ಕೆಲಸ ಮಾಡುವವರಿಗೆ ನಾಳೆಯೇ ಹಣ ಬಂದು ಬಿಡುತ್ತಾ ಎಂದು ಇದೇ ವೇಳೆ ಪ್ರಶ್ನಿಸಿದ ಡಿಕೆಶಿ, ಎರಡ್ಮೂರು ಇಲ್ಲವೇ ಐದು ವರ್ಷ ಆಗುತ್ತೆ ಅಲ್ವ? ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಹಣ ಯಜಮಾನಿಯರಿಗೆ ಬಂದಾಗ ಬರುತ್ತೆ ಅಂತ ಹಾರಿಕೆ ಉತ್ತರ ನೀಡುವ ಮೂಲಕ ಇದೀಗ ಡಿಸಿಎಂ ಗೃಹಿಣಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.