ಬೆಂಗಳೂರು : ಕರ್ನಾಟಕದ ಹೆಮ್ಮೆ ಬೆಂಗಳೂರಿನ ಅತ್ಯಂತ ಪ್ರಸಿದ್ಧ ಬ್ರಾಂಡ್ ಗಳಲ್ಲಿ ಒಂದಾದ ಎಂಟಿಆರ್ ಫುಡ್ಸ್ ಮತ್ತು ಈಸ್ಟರ್ನ್ ಕಾಂಡಿಮೆಂಟ್ಸ್ ಮೇಲೆ ಭಾರತೀಯ ಸಂಘಟಿತ ಕಂಪನಿ ಐಟಿಸಿ ಲಿಮಿಟೆಡ್ ಕಣ್ಣಿಟ್ಟಿದ್ದು, ಸುಮಾರು 1.4 ಬಿಲಿಯನ್ ಡಾಲರ್ ಗೆ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಎಂಟಿಆರ್ ಫುಡ್ಸ್ ಮತ್ತು ಈಸ್ಟರ್ನ್ ಕಾಂಡಿಮೆಂಟ್ಸ್ ನ ಮಾಲೀಕರಾಗಿರುವ ನಾರ್ವೆ ಮೂಲದ ಓರ್ಕ್ಲಾ ಎಎಸ್‌ಎ ಜೊತೆ ಐಟಿಸಿ ತನ್ನ ಮೊದಲ ಹಂತದ ಖರೀದಿ ಒಪ್ಪಂದದ ಮಾತುಕತೆ ಮುಕ್ತಾಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಕ್ಷಿಣ ಭಾರತದ ಆಹಾರ ಮಾರುಕಟ್ಟೆಯಲ್ಲಿ ಐಟಿಸಿಯ ಉಪಸ್ಥಿತಿಯನ್ನು ಇನ್ನಷ್ಟು ಬಲ ಪಡಿಸುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದ್ದು, ಈ ಎರಡೂ ಕಂಪನಿಗಳನ್ನು ಅಂದಾಜು 1.4 ಬಿಲಿಯನ್ ಯುಎಸ್ ಡಾಲರ್ ಅಂದರೆ 12,163 ಕೋಟಿ ರೂಪಾಯಿಗೆ ಖರೀದಿಯ ಬಗ್ಗೆ ಮಾತುಕತೆ ನಡೆಸಲಾಗಿದೆ.
FMCG, ಹೋಟೆಲ್‌ಗಳು ಮತ್ತು ಕೃಷಿ ವ್ಯವಹಾರಗಳನ್ನು ಒಳಗೊಂಡ ವೈವಿಧ್ಯಮಯ ಬಂಡವಾಳಕ್ಕೆ ಹೆಸರುವಾಸಿಯಾದ ಐಟಿಸಿ ಇದೀಗ ಕರ್ನಾಟಕದಲ್ಲಿ ತನ್ನ ಬಲ ಹೆಚ್ಚಿಸಲು ಅದರಲ್ಲೂ ದಕ್ಷಿಣ ಭಾರತದಲ್ಲಿ ಆಹಾರ ವಿಭಾಗದಲ್ಲಿ ತನ್ನ ಕೊಡುಗೆಗಳನ್ನು ಬಲಪಡಿಸುವ ನಿಟ್ಟಿನಿಂದ ಈ ಕಾರ್ಯಕ್ಕೆ ಕೈಹಾಕಿದೆ.
ಬೆಂಗಳೂರಿನ ಮಯ್ಯ ಕುಟುಂಬದಿಂದ 1950 ರಲ್ಲಿ ಪ್ರಾರಂಭವಾದ ಎಂಟಿಆರ್ ಫುಡ್ಸ್, ಇದೀಗ ಉತ್ತರ ಅಮೆರಿಕಾ, ಪಶ್ಚಿಮ ಏಷ್ಯಾ, ಜಪಾನ್ ಮತ್ತು ಆಗ್ನೇಯ ಏಷ್ಯಾದ ಸೇರಿದಂತೆ ಹಲವಾರು ದೇಶಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.