ಮೈಸೂರು: ಜಮೀನಿಗೆ ಸಂಬಂಧಿಸಿದ ಕಂದಾಯ ಮೇಲ್ಮನವಿ ಇತ್ಯರ್ಥಪಡಿಸಲು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮೈಸೂರು ಜಿಲ್ಲೆಯ ಹುಣಸೂರು ಉಪ ವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಅವರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
5.50 ಲಕ್ಷ ರೂಪಾಯಿ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಎಸಿ ಕಾವ್ಯಾರಾಣಿ ಹಾಗೂ ಕಚೇರಿಯ ಗುಮಾಸ್ತ ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.
10 ಲಕ್ಷ ರೂಪಾಯಿಗೆ ಬೇಡಿಕೆ!
ಹೆಚ್.ಡಿ. ಕೋಟೆ ತಾಲೂಕಿನಲ್ಲಿರುವ ನಾಲ್ಕೂವರೆ ಎಕರೆ ಜಮೀನಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಮೇಲ್ಮನವಿಯನ್ನು ಇತ್ಯರ್ಥಗೊಳಿಸಲು ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿತ್ತು.
ಆದರೂ ಕೆಲಸ ಮಾಡಿಕೊಡಲು ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಅವರು 10 ಲಕ್ಷ ರೂಪಾಯಿ ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಈ ಕುರಿತು ಬೆಂಗಳೂರು ಮೂಲದ ಸಂತ್ರಸ್ತೆ ಡಾ. ರೂಪಾ ಅವರು ಮೈಸೂರು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.


