ಚೇಳೂರು: ತಾಲೂಕಿನ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸೋಮವಾರದಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೌಸ್ ಪೀರ್ ಅವರ ನಿವೃತ್ತಿ ಹಿನ್ನೆಲೆಯಲ್ಲಿ ಭಾವಪೂರ್ಣ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯತಿಯ ಮಾಜಿ ಸದಸ್ಯರು ಹಾಗೂ ಸ್ಥಳೀಯ ಪ್ರಮುಖ ಮುಖಂಡರು ಸೇರಿ ನಿವೃತ್ತ ಪಿಡಿಓ ಗೌಸ್ ಪೀರ್ ಅವರಿಗೆ ಮೈಸೂರು ಪೇಟೆ ತೊಡಿಸಿ, ಶಾಲು ಹೊದಿಸಿ, ಹೂವಿನ ಹಾರಗಳನ್ನು ಹಾಕುವ ಮೂಲಕ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಟ್ಟರು.ಕಾರ್ಯಕ್ರಮದಲ್ಲಿ ಮುಖಂಡರಾದ ಜಿವಿ ಸುರೇಂದ್ರ ಅವರು ಮಾತನಾಡಿ, ಪಿಡಿಓ ಗೌಸ್ ಪೀರ್ ಅವರು ತಮ್ಮ ಸೇವಾ ಅವಧಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರ ನಿವೃತ್ತ ಜೀವನವು ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.

ಬಳಿಕ ಮಾತನಾಡಿದ ಗ್ರಾಮ ಪಂಚಾಯತಿ ಮಾಜಿ ಸದಸ್ಯ ನಾರಾಯಣಸ್ವಾಮಿ ಅವರು, ಅಧಿಕಾರಿಯೊಬ್ಬರು ನಿವೃತ್ತರಾಗುವಾಗ ಜನರಿಂದ ಇಂತಹ ಗೌರವ ಮತ್ತು ಪ್ರೀತಿಯನ್ನು ಗಳಿಸುವುದು ಸಾರ್ಥಕತೆಯ ಸಂಕೇತವಾಗಿದೆ. ಸಾರ್ವಜನಿಕರೊಂದಿಗೆ ಅವರು ಇಟ್ಟುಕೊಂಡಿದ್ದ ಉತ್ತಮ ಬಾಂಧವ್ಯವೇ ಇದಕ್ಕೆ ಸಾಕ್ಷಿ ಎಂದು ಅವರ ಸೇವೆಯನ್ನು ಶ್ಲಾಘಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪಿಡಿಓ ಗೌಸ್ ಪೀರ್ ಅವರು, ನನ್ನ ಸುದೀರ್ಘ ಸೇವಾ ಅವಧಿಯಲ್ಲಿ ಹಲವು ಏಳುಬೀಳುಗಳು, ಘಟನೆಗಳು ನಡೆದಿವೆ. ಆದರೆ ನಾನು ಯಾವತ್ತೂ ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸಿಲ್ಲ, ಯಾರ ಬಗ್ಗೆಯೂ ತಪ್ಪು ಭಾವನೆ ಇಟ್ಟುಕೊಂಡಿಲ್ಲ. ನನ್ನ ಕರ್ತವ್ಯದ ಅವಧಿಯಲ್ಲಿ ಏನಾದರೂ ಸಣ್ಣಪುಟ್ಟ ತಪ್ಪುಗಳಾಗಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಇಲಾಖೆಯ ಕೆಲಸದಲ್ಲಿ ನನ್ನೊಂದಿಗೆ ಕೈಜೋಡಿಸಿ ಸಹಕರಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಭಾವುಕರಾಗಿ ನುಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರಾದ ಮಂಜುನಾಥ್, ಪ್ರಮುಖ ಮುಖಂಡರು ಹಾಗೂ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಜೆ.ಎನ್. ಜಾಲರಿ, ಅಪ್ಪಿ,ಕೊಂಡಿಕೊಂಡ ಸುಬ್ಬಿರೆಡ್ಡಿ,ಪಾತೂರು ಮುರಳಿ,ಚಂದು,ಮೆಕಾನಿಕ್ ನಯಾಜ್ ಸೇರಿದಂತೆ ಗ್ರಾಮದ ಹಿರಿಯರು, ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದು ನಿವೃತ್ತ ಅಧಿಕಾರಿಗೆ ಶುಭ ಹಾರೈಸಿದರು.
ವರದಿ :ಯಾರಬ್. ಎಂ.

