ಶ್ರೀರಂಗಪಟ್ಟಣ: ಆರ್‌ಎಸ್‌ಎಸ್ ಸಂಘಟನೆಯ ವಿಚಾರವಾಗಿ ನಿರಂತರ ವಾಗ್ದಾಳಿ ನಡೆಸುತ್ತಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶ್ರೀರಂಗಪಟ್ಟಣ್ಣದ ಐತಿಹಾಸಿಕ ಮೂಡಲಬಾಗಿಲು ಅಂಜನೇಯ ಹಾಗೂ ಕ್ಷಣಾಂಬಿಕಾ ದೇವಾಲಯಗಳಿಗೆ ಭೇಟಿ ನೀಡಿದ ಅವರು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಪೂಜೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಸಂಘಟನೆಯನ್ನ ಪದೇ ಪದೇ ತೆಗಳಲು ಕಾರಣ ಇದೆ. ಮುಂದಿನ 2028ರ ಚುನಾವಣೆಯಲ್ಲಿ ತಮ್ಮನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡಲಿ ಎಂದು ಈ ರೀತಿ ಮಾಡುತ್ತಿದ್ದಾರೆ.
ಈಗಾಗಲೇ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ. ನಾಳೆಯಿಂದ ಅವರು ಜಾಮೀನು ಪಡೆದುಕೊಂಡು ಓಡಾಡಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ವಿಜಯೇಂದ್ರ ವಿರುದ್ಧ ಅಭಿಯಾನ
ಇನ್ನು ಬಿಜೆಪಿ ಆಂತರಿಕ ವಿಚಾರಗಳ ಬಗ್ಗೆ ಸಹ ಮಾತನಾಡಿದ ಅವರು, ಬಿವೈ ವಿಜಯೇಂದ್ರ ಅವರನ್ನ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಆಂದೋಲನ ಆರಂಭ ಆಗಿದೆ.
ರಾಜ್ಯದಲ್ಲಿ ಬಿಜೆಪಿ ಪಕ್ಷ ವಿರೋಧ ಪಕ್ಷವಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನರೇಂದ್ರ ಮೋದಿ ಅವರನ್ನ ಬೈದರೆ ರಾಹುಲ್ ಗಾಂಧಿ ಅವರಿಗೆ ಬಹಳ ಸಂತೋಷವಾಗುತ್ತದೆ. ಅವರೊಬ್ಬ ವಿಘ್ನ ಸಂತೋಷಿ ಎಂದು ವಾಗ್ದಾಳಿ ನಡೆಸಿದ್ದಾರೆ.


