ಬೆಂಗಳೂರು: ವಿಧಾನ ಪರಿಷತ್ (Vidhana Parishad )ಉಪಸಭಾಪತಿ ಎಂ.ಕೆ. ಪ್ರಾಣೇಶ್ (Pranesh ) ಅವರ ಪರಿಷತ್ ಸದಸ್ಯತ್ವವನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ಆದೇಶ ಹೊರಡಿಸಿದೆ.
ಈ ಹಠಾತ್ ಬೆಳವಣಿಗೆಯು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಹೊಸ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.
ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆ ನಡೆದ ಸಂದರ್ಭದಲ್ಲಿ, ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಹೈಕೋರ್ಟ್ ಈ ಹಿಂದೆ ಮಹತ್ವದ ತೀರ್ಪು ನೀಡಿತ್ತು. ಹೈಕೋರ್ಟ್‌ನ ಈ ತೀರ್ಪನ್ನು ಪ್ರಶ್ನಿಸಿ ಎಂ.ಕೆ. ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಆದರೆ ಈ ಕಾನೂನು ಹೋರಾಟದಲ್ಲಿ ಗಾಯತ್ರಿ ಶಾಂತೇಗೌಡ ಅವರಿಗೆ ಮೇಲುಗೈಯಾಗಿದ್ದು, ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಂದು ಎಂ.ಕೆ. ಪ್ರಾಣೇಶ್ ಅವರ ವಿಧಾನ ಪರಿಷತ್ ಸದಸ್ಯತ್ವವನ್ನು ರದ್ದುಗೊಳಿಸಿ ಅಂತಿಮ ಆದೇಶ ಪ್ರಕಟಿಸಿದೆ. ಈ ಆದೇಶದ ಬೆನ್ನಲ್ಲೇ ಕರಾವಳಿ ಮತ್ತು ಮಲೆನಾಡು ಭಾಗ ಸೇರಿದಂತೆ ರಾಜ್ಯ ಬಿಜೆಪಿಗೆ ದೊಡ್ಡ ಹಿನ್ನಡೆಯಾದಂತಾಗಿದೆ.


