ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಕಂಚಗಯ್ಯನದೊಡ್ಡಿಯಲ್ಲಿ ಬುದ್ಧಿವಾದ ಹೇಳಿದ್ದ ಅಜ್ಜಿಯನ್ನೇ ಮೊಮ್ಮಗ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಡೆದಿದೆ.
ಮೃತರನ್ನು ಗೌರಮ್ಮ ಎಂದು ಗುರುತಿಸಲಾಗಿದ್ದು, ಆರೋಪಿ ಅವರ ಮೊಮ್ಮಗ ಪ್ರಜ್ವಲ್ . ಕಾಲೇಜು ವ್ಯಾಸಂಗವನ್ನು ಅರ್ಧದಲ್ಲೇ ಬಿಟ್ಟಿದ್ದ ಪ್ರಜ್ವಲ್ ಯಾವುದೇ ಉದ್ಯೋಗ ಮಾಡದೆ ಅಲೆದಾಡುತ್ತಿದ್ದ ಎನ್ನಲಾಗಿದೆ.ಅಲ್ಲದೆ ಗಾಂಜಾ ವ್ಯಸನಕ್ಕೂ ಒಳಗಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪ್ರಜ್ವಲ್‌ನ ವರ್ತನೆ ಬಗ್ಗೆ ಅಸಮಾಧಾನಗೊಂಡಿದ್ದ ಗೌರಮ್ಮ, “ಕೆಲಸ ಮಾಡಿಕೊಂಡು ಜವಾಬ್ದಾರಿಯಿಂದ ಬದುಕು, ಸಮಯ ಮತ್ತು ಹಣ ವ್ಯರ್ಥ ಮಾಡಬೇಡ” ಎಂದು ಆಗಾಗ ಬುದ್ಧಿವಾದ ಹೇಳುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ವಾಗ್ವಾದ ನಡೆಯುತ್ತಿತ್ತು.
ಮಂಗಳವಾರ ರಾತ್ರಿ ಮತ್ತೊಮ್ಮೆ ಇದೇ ವಿಷಯವಾಗಿ ಮಾತಿನ ಚಕಮಕಿ ನಡೆದಿದ್ದು, ಮುಂಜಾನೆ ಸುಮಾರು 2 ಗಂಟೆ ವೇಳೆಗೆ ಪ್ರಜ್ವಲ್ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಮಲಗಿದ್ದ ಅಜ್ಜಿ ಗೌರಮ್ಮ ಅವರ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಮನೆಗೆ ತೆರಳಿ ತಾಯಿಗೆ ತಾನು ಅಜ್ಜಿಯನ್ನು ಕೊಂದಿರುವುದಾಗಿ ಹೇಳಿ ಪರಾರಿಯಾಗಿದ್ದಾನೆ.
ಮಾಹಿತಿ ಪಡೆದ ಬನ್ನೇರುಘಟ್ಟ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.


