ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರಾಗಲಪರ್ವಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹತ್ತು ಜನರ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.ಜೀವ ಭಯದಲ್ಲಿರುವ ಸಂತ್ರಸ್ತ ಶರಣಬಸವ ಬೆಳಗಿನೂರು ಅವರು, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಮೇ 28ರ ಸಂಜೆ 5 ಗಂಟೆ ಸುಮಾರಿಗೆ ಶರಣಬಸವ ಅವರು ತಮ್ಮ ಜಮೀನಿಗೆ ತೆರಳಿದ್ದಾಗಸಂಬಂಧಿಕರಾದ ಯಂಕಪ್ಪ, ಅಮರೇಶ ಮತ್ತು ಇತರರು ಅಕ್ರಮವಾಗಿ ಜಮೀನಿಗೆ ಪ್ರವೇಶಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕಣ್ಣಿಗೆ ಖಾರದ ಪುಡಿ ಎರಚಿ ಕಲ್ಲುಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಶರಣಬಸವ ಅವರ ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳದಲ್ಲಿದ್ದ ಮಲ್ಲಯ್ಯ ಮತ್ತು ಗಂಗಾಧರ ಎಂಬುವರು ಮಧ್ಯಪ್ರವೇಶಿಸಿ ದೂರುದಾರರನ್ನು ರಕ್ಷಿಸಿದ್ದಾರೆ ದಾಳಿಯ ಬಳಿಕ ಆರೋಪಿಗಳು "ಮತ್ತೆ ಈ ಕಡೆ ಬಂದರೆ ಕೊಲೆ ಮಾಡುತ್ತೇವೆ" ಎಂದು ಬೆದರಿಕೆ ಹಾಕಿದ್ದಾರೆ ಎಂದು ಶರಣಬಸವ ಆರೋಪಿಸಿದ್ದಾರೆ.
ಈ ಸಂಬಂಧ ಬಳಗನೂರು ಪೊಲೀಸ್ ಠಾಣೆಯಲ್ಲಿ (ಗುನ್ನೆ ನಂ: 96/2026, ಬಿಎನ್‌ಎಸ್ 2023 ರ ವಿವಿಧ ಕಲಂಗಳ ಅಡಿ) ಪ್ರಕರಣ ದಾಖಲಾಗಿದೆ. ಆದರೆ, ಸ್ಥಳೀಯ ಪಿಎಸ್ಐ ಅವರು ಆರೋಪಿಗಳನ್ನು ಇದುವರೆಗೆ ಬಂಧಿಸಿಲ್ಲ ಎಂದು ಶರಣಬಸವ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಆರೋಪಿಗಳನ್ನು ಬಂಧಿಸಿ, ನನಗೆ ಹಾಗೂ ನನ್ನ ಕುಟುಂಬಕ್ಕೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಡಿವೈಎಸ್ಪಿ ಮತ್ತು ಎಸ್ಪಿಯವರಿಗೆ ಪತ್ರಿಕಾ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
ವರದಿ:ಬಸವರಾಜ ಬುಕ್ಕನಹಟ್ಟಿ

