ಬೆಂಗಳೂರು: ಕನ್ನಡದ ಖ್ಯಾತ ನಟಿ ರುಕ್ಮಿಣಿ ವಸಂತ ಅವರ ಫೋಟೋ ಮತ್ತು ವಿಡಿಯೋಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕಮಾಂಡ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ನಿವಾಸಿಗಳಾದ ಚಂದ್ರಕಾಂತ್ ಹಾಗೂ ರಂಜಿತ್ ಮತ್ತು ಬಾಗಲಕೋಟೆ ಮೂಲದ ರವಿಕುಮಾರ್ ಬಂಧಿತ ಆರೋಪಿಗಳು.
ಸದ್ಯ ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೂರು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ತಮ್ಮ ಹೆಸರಿನಲ್ಲಿ ಹರಿದಾಡುತ್ತಿದ್ದ ಅಶ್ಲೀಲ ಡೀಪ್ ಫೇಕ್ ಚಿತ್ರ ಹಾಗೂ ವಿಡಿಯೋಗಳ ವಿರುದ್ಧ ನಟಿ ರುಕ್ಮಿಣಿ ವಸಂತ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಈ ಬಗ್ಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ಅಧಿಕೃತವಾಗಿ ದೂರು ದಾಖಲಿಸಿದ್ದರು.
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಸೈಬರ್ ಪೊಲೀಸರು ತನಿಖೆ ಕೈಗೊಂಡು, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


