ಇಂದೋರ್: ಹೆಣ್ಣು ಮಗು ಎಂದರೆ ಸಾಕ್ಷಾತ್ ಮಹಾಲಕ್ಷ್ಮಿ ಮನೆಗೆ ಬಂದಂತೆ ಎಂಬ ನಂಬಿಕೆ ಭಾರತೀಯರಲ್ಲಿದೆ.
ಆದರೆ ಇಲ್ಲೊಂದು ಕುಟುಂಬ ಬರೋಬ್ಬರಿ 52 ವರ್ಷಗಳಿಂದ ಈ 'ಮಹಾಲಕ್ಷ್ಮಿ'ಯ ಆಗಮನಕ್ಕಾಗಿ ಕಾದು ಕುಳಿತಿತ್ತು. ಕೊನೆಗೂ ಐದು ದಶಕಗಳ ನಂತರ ಮನೆಯಲ್ಲಿ ಹೆಣ್ಣು ಮಗುವಿನ ಅಳು ಕೇಳಿಸಿದ್ದು, ಕುಟುಂಬಸ್ಥರ ಸಂಭ್ರಮ ಮುಗಿಲು ಮುಟ್ಟಿದೆ.
ಮಧ್ಯಪ್ರದೇಶದ ಇಂದೋರ್ ನಗರದ ಅಪರೂಪದ ಮತ್ತು ಭಾವುಕ ಕ್ಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಹೃದಯ ಗೆಲ್ಲುತ್ತಿದೆ.
ಆಸ್ಪತ್ರೆಯಲ್ಲೇ ಹಬ್ಬದ ವಾತಾವರಣ
ಇಂದೋರ್‌ನ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಬೇಲಾ ಶಾ ಜೈನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ, ವೈದ್ಯರು ನವಜಾತ ಹೆಣ್ಣು ಮಗುವನ್ನು ಎತ್ತಿಕೊಂಡು ಆಪರೇಷನ್ ಥಿಯೇಟರ್‌ನಿಂದ ಹೊರಬರುತ್ತಿದ್ದಂತೆಯೇ ಹೊರಗೆ ಕಾಯುತ್ತಿದ್ದ ಕುಟುಂಬದ ಸದಸ್ಯರು ಹರ್ಷೋದ್ಗಾರ ಮಾಡುವುದನ್ನು ಕಾಣಬಹುದು. ಪ್ರತಿಯೊಬ್ಬರ ಮುಖದಲ್ಲೂ ಬೆಲೆಕಟ್ಟಲಾಗದ ನಗು ಮೂಡಿದ್ದು, ಚಪ್ಪಾಳೆ ತಟ್ಟುವ ಮೂಲಕ ತಮ್ಮ ಮನೆಯ ಪುಟ್ಟ ರಾಜಕುಮಾರಿಯನ್ನು ಸ್ವಾಗತಿಸಿದ್ದಾರೆ.


