ತುರುವೇಕೆರೆ : ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಡ್ರಗ್ಸ್, ಮದ್ಯಪಾನ ಮಾರಕವಾಗಿದ್ದು ಸರ್ಕಾರ ಕೂಡಲೇ ಗುಟ್ಕಾ, ಲಿಕ್ಕರ್ ಬ್ಯಾನ್ ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ನಶೆ ಮುಕ್ತ ಕರ್ನಾಟಕ, ನಶೆ ಮುಕ್ತ ತುರುವೇಕೆರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ರಾಜಕಾರಣಿಗಳು ನಾವು ಭಾಷಣ ಮಾಡುತ್ತೇವೆ. ಈ ಹಿಂದೆ ನಾನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿದ್ದಾಗ ಅಬಕಾರಿ ಆದಾಯ 3500 ಕೋಟಿಯಿತ್ತು. ಈಗ ಸಿದ್ದರಾಮಯ್ಯನವರು ಆದಾಯ ಸಂಗ್ರಹಣೆ ಗುರಿಯನ್ನು 41,500 ಕೋಟಿ ಮಾಡಿದ್ದಾರೆ. ಸರ್ಕಾರದ ಆದಾಯದ ಮೂಲವೇ ಅಬಕಾರಿಯಾಗಿದೆ. ಹೀಗಿದ್ದಾಗ ಪಾನನಿಷೇಧ ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಮದ್ಯಪಾನ, ಡ್ರಗ್ಸ್ ವ್ಯಸನಕ್ಕೆ ದಾಸರಾದ ವ್ಯಕ್ತಿಗಳಿಂದ ಅವರ ಕುಟುಂಬ ಅಕ್ಷರಶಃ ನರಕಸದೃಶವಾಗಿದೆ. ಮದ್ಯವ್ಯಸನಿಗಳು, ಡ್ರಗ್ಸ್ ವ್ಯಸನಿಗಳಿಂದ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಗುಟ್ಕಾ, ಪಾನ್, ಲಿಕ್ಕರ್ ಬ್ಯಾನ್ ಮಾಡಿ ಕುಟುಂಬದ ಪ್ರಗತಿಗೆ, ಸಮಾಜದ ಅಭಿವೃದ್ದಿಗೆ ಮುಂದಾಗಬೇಕೆಂದರು.
ಒಂದೆಡೆ ಡ್ರಗ್ಸ್ ಹಾವಳಿಯಾದರೆ ಮತ್ತೊಂದೆಡೆ ಆನ್ ಲೈನ್ ಗೇಮ್ಸ್ ಸಮಾಜದಲ್ಲಿ ಯುವಕರನ್ನು ಹಾಳು ಮಾಡುತ್ತಿದೆ. ಪಕ್ಕದ ನಾಗಮಂಗಲ ತಾಲ್ಲೂಕಿನಲ್ಲಿ ವೈದ್ಯಕೀಯ ಕಾಲೇಜಿದೆ. ಆ ಭಾಗದಲ್ಲಿ ಬೆಳ್ಳೂರು ಮುಂತಾದೆಡೆ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದು, ಅಲ್ಲಿಂದ ಶಿವಮೊಗ್ಗ ಮುಂತಾದೆಡೆಗಳಲ್ಲಿ ರವಾನೆಯಾಗುತ್ತಿದೆ ಎಂಬ ಮಾಹಿತಿ ಇದೆ. ನಮ್ಮ ತಾಲೂಕಿನ ಮಾಯಸಂದ್ರ ಹೋಬಳಿಗೆ ಬೆಳ್ಳೂರು ಹತ್ತಿರವಿದ್ದು, ಪೊಲೀಸ್ ಇಲಾಖೆ ಡ್ರಗ್ಸ್ ವ್ಯಾಪಿಸದಂತೆ ಕ್ರಮವಹಿಸಬೇಕು. ತುರುವೇಕೆರೆ ವಿಧಾನಸಭಾ ಕ್ಷೇತ್ರವನ್ನು ನಶೆ ಮುಕ್ತ ಕ್ಷೇತ್ರವನ್ನಾಗಿ ಮಾಡಲು ಸಂಕಲ್ಪಿಸಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲೇ ಡ್ರಗ್ಸ್ ಹಾವಳಿ ಕಂಡುಬಂದಲ್ಲಿ ಮಟ್ಟ ಹಾಕುವಲ್ಲಿ ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಲೋಹಿತ್, ಪಿ.ಎಸ್.ಐ. ಮೂರ್ತಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮ, ಮೊಬೈಲ್ ಬಳಕೆಯಿಂದಾಗುವ ಅನಾಹುತ ಹಾಗೂ ಪೋಕ್ಸೋ ಕಾಯ್ದೆ, ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಸಂಚಾರಿ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ನಂಜೇಗೌಡ, ಉಪಪ್ರಾಂಶುಪಾಲ ವೆಂಕಟೇಶ್, ಉಪನ್ಯಾಸಕ ಷಣ್ಮುಖ್, ರಶ್ಮಿತ, ಪೊಲೀಸ್ ಸಿಬ್ಬಂದಿಗಳಾದ ರಾಕೇಶ್, ರಾಜು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


