ಪರಕನಹಟ್ಟಿ (ಹುಕ್ಕೇರಿ): ಸಮೀಪದ ಸುಕ್ಷೇತ್ರ, ದಾಸೋಹ ಧಾಮ ಎಂದೇ ಪ್ರಸಿದ್ಧಿ ಪಡೆದಿರುವ ಪರಕನಹಟ್ಟಿ ಗ್ರಾಮದಿಂದ ಶ್ರೀ ಸಿದ್ಧಾರೂಢರ ಮಹಾಸಂಸ್ಥಾನ ಹುಬ್ಬಳ್ಳಿಗೆ ಹಮ್ಮಿಕೊಳ್ಳಲಾದ 'ಪ್ರಥಮ ವರ್ಷದ ಪಾದಯಾತ್ರೆ'ಯು ಜೂನ್ 8ರಂದು ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಪರವಶತೆಯಿಂದ ಆರಂಭಗೊಂಡಿತು. ಬೆಳಗಿನ ಜಾವ 4 ಗಂಟೆಗೆ ಗ್ರಾಮದ ಸಿದ್ಧಾರೂಢರ ಮಠದಲ್ಲಿ ಮಹಾ ಅಭಿಷೇಕ, ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ನೆರವೇರಿತು. ಗ್ರಾಮದ ಸಮಸ್ತ ಜನರು, ಗುರು-ಹಿರಿಯರ ಉಪಸ್ಥಿತಿಯಲ್ಲಿ ಮಹಾಪೂಜೆ ಸಲ್ಲಿಸಿ, ಕೃಪಾಶೀರ್ವಾದ ಪಡೆದರು.

ಬೆಳಗಿನ ಜಾವವೇ ಗ್ರಾಮದ ಭಕ್ತಾದಿಗಳು ಭಜನೆ, ಜಯಘೋಷ ಹಾಗೂ ಮಂಗಳವಾದ್ಯಗಳ ನಿನಾದದೊಂದಿಗೆ ಹೆಜ್ಜೆ ಹಾಕಲು ತೊಡಗಿದರು. ಗ್ರಾಮದ ಹಿರಿಯರ ಸಾನ್ನಿಧ್ಯದಲ್ಲಿ ಈ ಪ್ರಥಮ ವರ್ಷದ ಪಾದಯಾತ್ರೆಗೆ ಅಧಿಕೃತ ಚಾಲನೆ ದೊರೆಯಿತು. ಸಿದ್ಧಾರೂಢರ ನಾಮಸ್ಮರಣೆಯಿಂದ ಪರಕನಹಟ್ಟಿ ಗ್ರಾಮದ ಗಲ್ಲಿ-ಗಲ್ಲಿಗಳಲ್ಲೂ ಭಕ್ತಿಭಾವದ ತರಂಗಗಳು ಅಲೆಯಾಡಿದವು.
ಈ ಪಾದಯಾತ್ರೆಯಲ್ಲಿ ಗ್ರಾಮದ ಅಪಾರ ಸಂಖ್ಯೆಯ ಯುವಕರು, ಮಹಿಳೆಯರು ಹಾಗೂ ಹಿರಿಯ ಭಕ್ತಾದಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ಶ್ರೀ ಸಿದ್ಧಾರೂಢರ ಕೃಪೆಗೆ ಪಾತ್ರರಾದರು.
ವರದಿ ಮಹಾಂತೇಶ್ ಎಸ್ ಹುಲಿಕಟ್ಟಿ


