ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಒಟ್ಟು 814 ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಈ 814 ಹುದ್ದೆಗಳ ಭರ್ತಿಗಾಗಿ 'ಕರ್ನಾಟಕ ಪರೀಕ್ಷಾ ಪ್ರಾಧಿಕಾರ'ವನ್ನು ನೇಮಕಾತಿ ಪ್ರಾಧಿಕಾರವನ್ನಾಗಿ ನೇಮಿಸಿ ಸರ್ಕಾರ ನಿರ್ದೇಶಿಸಿದೆ.
ಜೊತೆಗೆ ಈ ನೇಮಕಾತಿಯಲ್ಲಿ ಆಯ್ಕೆಯಾಗಿ ಉಪನ್ಯಾಸಕರಾಗುವವರು 9 ಮತ್ತು 10ನೇ ತರಗತಿಯ ಬೋಧನೆಗೂ ಸಿದ್ಧರಾಗಿರಬೇಕಾಗುತ್ತದೆ. ನೇಮಕಾತಿ ಆಗಲಿರುವ ಒಟ್ಟು ಹುದ್ದೆಗಳಲ್ಲಿ ಉಳಿಕೆ ಮೂಲ ವೃಂದದ 778 ಮತ್ತು ಕಲ್ಯಾಣ ಕರ್ನಾಟಕದ 36 ಹುದ್ದೆಗಳಿರಲಿವೆ.
ಕನ್ನಡ - 89, ಇಂಗ್ಲಿಷ್ - 145, ಇತಿಹಾಸ - 50, ಅರ್ಥಶಾಸ್ತ್ರ - 90, ರಾಜ್ಯಶಾಸ್ತ್ರ - 25, ಸಮಾಜಶಾಸ್ತ್ರ -25, ಭೂಗೋಳಶಾಸ್ತ್ರ -10, ವಾಣಿಜ್ಯಶಾಸ್ತ್ರ - 150, ಭೌತಶಾಸ್ತ್ರ - 30, ರಸಾಯನಶಾಸ್ತ್ರ- 30, ಗಣಿತಶಾಸ್ತ್ರ - 30, ಜೀವಶಾಸ್ತ್ರ- 30, ಕಂಪ್ಯೂಟರ್ ಸೈನ್ಸ್ -110 ಹುದ್ದೆಗಳಿವೆ.
ಕಲ್ಯಾಣ-ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದ ಅಡಿಯಲ್ಲಿ ಈ ಹುದ್ದೆಗಳನ್ನು ಮರು ವಿಂಗಡಿಸಿ, ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸರ್ಕಾರವು ಹಸಿರು ನಿಶಾನೆ ತೋರಿದೆ.
ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನ್ಯಾಸಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಈ ಹುದ್ದೆಗಳ ನೇರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ.


