ಬೈಲಹೊಂಗಲ: ಮುಂದೆ ಸಾಗುತ್ತಿದ್ದ ಬಸ್‌ಗೆ ಏಕಾಏಕಿ ಮೇಕೆಯೊಂದು ಅಡ್ಡ ಬಂದ ಪರಿಣಾಮ ಚಾಲಕ ಬ್ರೇಕ್ ಹಾಕಿದ್ದು, ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಬಸ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಘಟನೆ ಸೋಮವಾರ ಸಂಜೆ ನಗರದ ಆಶ್ರಯ ಕಾಲೋನಿ ಸಮೀಪ ನಡೆದಿದೆ. ಅಪಘಾತದಲ್ಲಿ ಎರಡೂ ಬಸ್‌ಗಳಲ್ಲಿದ್ದ ಸುಮಾರು 20 ರಿಂದ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೈಲಹೊಂಗಲದಿಂದ ಬೇವಿನಕೊಪ್ಪದತ್ತ ತೆರಳುತ್ತಿದ್ದ ಬಸ್‌ಗೆ ಮೇಕೆ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾರೆ. ಇದೇ ವೇಳೆ ಹಿಂಬದಿಯಿಂದ ದೇವಲಾಪುರದತ್ತ ತೆರಳುತ್ತಿದ್ದ ಮತ್ತೊಂದು ಬಸ್‌ನ ಚಾಲಕ ಕೂಡ ವಾಹನವನ್ನು ನಿಯಂತ್ರಿಸಲು ಬ್ರೇಕ್ ಹಾಕಿ ಪ್ರಯತ್ನಿಸಿದರೂ, ಬಸ್ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಕೆಲವರಿಗೆ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿವೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹೊರತೆಗೆದು, ಸಾರ್ವಜನಿಕರ ಸಹಕಾರದೊಂದಿಗೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ನೆರವಾದರು.
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರಿಗೆ ತಲೆಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪರೀಕ್ಷೆ ಹಾಗೂ ಸಿಟಿ ಸ್ಕ್ಯಾನ್ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.
ತುರ್ತು ಸಂದರ್ಭದಲ್ಲಿ ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ನೆರವು ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕಾಗಿದ್ದರೂ ಅಂಬುಲೆನ್ಸ್‌ಗಾಗಿ ಪರದಾಡುವಂತಾದ ಘಟನೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಘಟನೆಯ ಕುರಿತು ಮಾಹಿತಿ ತಿಳಿದು ಪಿಎಸ್ ಐ ವಾಹಿದ್ ಯಾದವಾಡ, ಘಟಕ ವ್ಯವಸ್ಥಾಪಕಿ , ಎಟಿಸಿ ಮಹೇಶ ತಿರಕನ್ನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಸ್ಪತ್ರೆಯಲ್ಲಿ ದಾಖಲಾದ ಗಾಯಳುಗಳಿಗೆ ಸಂತವಾನ ಹೇಳಿದರು
ವರದಿ :ದುಂಡಪ್ಪ ಹೂಲಿ


