ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಜರಗನಹಳ್ಳಿ, ಕನಕಪುರ ರಸ್ತೆಯಲ್ಲಿ ನಡೆದಿದೆ. ಉದಯ್ ಕುಮಾರ್ ಎಂಬಾತನನ್ನು ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಮಾಹಿತಿಯ ಪ್ರಕಾರ, ಬಾರ್‌ನಲ್ಲಿ ಉದಯ್ ಕುಮಾರ್ ಗುರಾಯಿಸಿ ನೋಡಿದ್ದಾನೆ ಎಂಬ ಕಾರಣಕ್ಕೆ ಅಪರಿಚಿತ ಆರೋಪಿಗಳು ಗಲಾಟೆ ಆರಂಭಿಸಿದ್ದರು.
ಬಳಿಕ ಅಲ್ಲಿಂದ ಹೊರಬಂದ ಉದಯ್ ಕುಮಾರ್‌ನನ್ನು ಹಿಂಬಾಲಿಸಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಚಾಕುವಿನಿಂದ ಇರಿದಿರುವುದಲ್ಲದೆ, ಬಿಯರ್ ಬಾಟಲಿಯಿಂದಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ಉದಯ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಶೇಷವೆಂದರೆ, ಆರೋಪಿಗಳು ಮತ್ತು ಮೃತನ ನಡುವೆ ಯಾವುದೇ ಪೂರ್ವ ಪರಿಚಯ ಇರಲಿಲ್ಲ. ಕೇವಲ ಗುರಾಯಿಸಿ ನೋಡಿದ ವಿಚಾರವನ್ನೇ ನೆಪ ಮಾಡಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ.


