ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಆರ್ಥಿಕ ಹೊರೆ ತಗ್ಗಿಸಲು ಬಸ್ ಪ್ರಯಾಣ ದರವನ್ನು ಕನಿಷ್ಠ ಶೇ.25ರಷ್ಟು ಹೆಚ್ಚಿಸಬೇಕೆಂದು ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇತನ ಹಾಗೂ ಬಿಡಿಭಾಗಗಳ ವೆಚ್ಚದಿಂದಾಗಿ ಸಾರಿಗೆ ನಿಗಮಗಳಿಗೆ ವಾರ್ಷಿಕ ಸುಮಾರು 8,000 ಕೋಟಿ ರೂಪಾಯಿ ನಷ್ಟವಾಗುತ್ತಿದ್ದು, ನಿಗಮಗಳನ್ನು ಸದೃಢಗೊಳಿಸಲು ಈ ದರ ಪರಿಷ್ಕರಣೆ ಅನಿವಾರ್ಯ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸಮಿತಿಯು ಶೇ.25ರಷ್ಟು ಏರಿಕೆಗೆ ಶಿಫಾರಸು ಮಾಡಿದ್ದರೂ, ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆ ತಡೆಯಲು ಸರ್ಕಾರವು ಶೇ.15ರಿಂದ ಶೇ.17ರಷ್ಟು ಮಾತ್ರ ದರ ಹೆಚ್ಚಿಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಕೆಎಸ್ಸಾರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ನಿಗಮಗಳಿಗೆ ಶೇ.13ರಿಂದ 15ರಷ್ಟು ಹಾಗೂ ಬಿಎಂಟಿಸಿಗೆ ಶೇ.17ರಷ್ಟು ದರ ಹೆಚ್ಚಳ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ.


