ತುರುವೇಕೆರೆ: ಕ್ರಷರ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಕಟ್ಟಿ ಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿರುವ ಕ್ರಷರ್ ಮಾಲೀಕರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಕರುನಾಡ ವಿಜಯಸೇನೆ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ ಒತ್ತಾಯಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಕೋಳಘಟ್ಟ ಗ್ರಾಮದಲ್ಲಿ ಮಂಡ್ಯ ಮೂಲದ ವ್ಯಕ್ತಿ ಅಕ್ರಮವಾಗಿ ಕ್ರಷರ್ ನಡೆಸುತ್ತಿದ್ದು ಅದನ್ನು ನಿಲ್ಲಿಸುವಂತೆ ಈ ಹಿಂದೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಆದರೂ ಅಧಿಕಾರಿಗಳು ಕ್ರಮವಹಿಸಿರಲಿಲ್ಲ. ಆದರೆ ಈಗ ಅದೇ ಕ್ರಷರ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕ್ರಷರ್ ಮಾಲೀಕ ಹಲ್ಲೆ ನಡೆಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಪೋಟೋ, ವಿಡಿಯೋ ಹರಿದಾಡುತ್ತಿದೆ. ಕಾರ್ಮಿಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆದಿರುವುದು ಖಂಡನೀಯ. ಕೂಡಲೇ ಕ್ರಷರ್ ಮಾಲೀಕನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದರು.
ಕ್ರಷರ್ ಇಂದಾಗಿ ಕೋಳಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಪರಿಸರ ಹಾಳಾಗಿದೆ. ಅಲ್ಲಿನ ಜನರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಕ್ರಷರ್ ಅನ್ನು ಮುಚ್ಚಿಸಬೇಕು ಹಾಗೂ ಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವ ಮಾಲೀಕನ ಮೇಲೆ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಕರುನಾಡ ವಿಜಯಸೇನೆ ಸಂಘಟನೆಯು ವಿವಿಧ ಸಂಘ ಸಂಸ್ಥೆಗಳು ಹಾಗೂ ಆ ಭಾಗದ ರೈತರು, ಜನರೊಡಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದರು.
ವರದಿ: ಗಿರೀಶ್ ಕೆ ಭಟ್


