ಬೆಂಗಳೂರು: ನಿರುದ್ಯೋಗದ ಸಮಸ್ಯೆ ತೀವ್ರ ಹೆಚ್ಚುತ್ತಿದ್ದು, ಇದರ ಬೆನ್ನಲ್ಲೇ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಶುಕ್ರವಾರ ಹೊಸ ಚಿಂತನೆಯೊಂದನ್ನು ಹರಿಬಿಟ್ಟಿದ್ದಾರೆ.
ವಿಜಯನಗರದ ಬಂಟರ ಭವನದಲ್ಲಿ, ವಿದ್ಯಾರ್ಥಿಗಳು, ಯುವಕರು, ಕೆಪಿಎಸ್ ಸಿ ಆಯ್ಕೆಯಲ್ಲಿ ಮೋಸ ಹೋದವರು, ಭವಿಷ್ಯದ ಕನಸು ಹೊತ್ತವರು, ಉದ್ಯೋಗ ವಂಚಿತರ ಜೊತೆ ನೇರ ಸಂವಾದ ನಡೆಸಿದರು.
ಸರ್ಕಾರಿ ಉದ್ಯೋಗದ ಅವಧಿಯನ್ನು 10 ರಿಂದ 15 ವರ್ಷಗಳಿಗೆ ಸೀಮಿತಗೊಳಿಸುವ ಯೋಜನೆಯಿದೆ. ಒಬ್ಬ ವ್ಯಕ್ತಿ 10 ರಿಂದ 15 ವರ್ಷ ಕೆಲಸ ಮಾಡಿದ ಬಳಿಕ ನಿವೃತ್ತಿ ನೀಡಿದರೆ, ಆ ಸ್ಥಾನದಲ್ಲಿ ಮತ್ತೊಬ್ಬರಿಗೆ ಉದ್ಯೋಗ ನೀಡಬಹುದು.
ನಿವೃತ್ತಿಯಾದವರಿಗೆ ಪಿಂಚಣಿ ಸಿಗುವುದರಿಂದ ಅವರೂ ಬದುಕಬಹುದು. ಜೊತೆಗೆ ಖಾಸಗಿ ಉದ್ಯೋಗವನ್ನೂ ಮಾಡಬಹುದು. ಉದ್ಯೋಗದಿಂದ ವಂಚಿತರಾದ ಮತ್ತೊಬ್ಬರಿಗೂ ಕೆಲಸ ಸಿಗುತ್ತದೆ.
ಈ ರೀತಿಯ ವ್ಯವಸ್ಥೆ ಜಾರಿಗೆ ತಂದರೆ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಕಲ್ಪಿಸಲು ಸಾಧ್ಯವೇ? ಎಲ್ಲರೂ ಬದುಕಲು ಸಾಧ್ಯವಾಗುತ್ತದೆಯೇ ಎಂಬುದರ ಬಗ್ಗೆ ಯೋಚನೆ ಮಾಡಿ, ಈ ಯೋಜನೆ ಪ್ರಾಯೋಗಿಕವಾಗಿ ಸಾಧ್ಯವೇ ಎಂಬುದರ ಕುರಿತು ನಿಮ್ಮ ಅಭಿಪ್ರಾಯ ತಿಳಿಸುವಂತೆ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು.


